ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಥೋಡ್ ಮಾರ್ಗದರ್ಶನದಲ್ಲಿ ಸೋಮವಾರ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ಹಾಗೂ ತಾಲೂಕಾ ತಂಬಾಕು ನಿಯಂತ್ರಣ ತನಿಖಾ ದಳ ಗದಗ, ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿನ ಶಾಲಾ ಕಾಲೇಜುಗಳ ಸುತ್ತ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿಗಳ ವಿರುದ್ಧ ಕ್ರಮ ವಹಿಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದವರಿಗೆ ರೂ.1400/- ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಆ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ. ಚಹಾ ಅಂಗಡಿ, ಪಾನ್ ಶಾಪ್‌ಗಳ ಒಳಗಡೆ ಅನಧಿಕೃತ ಧೂಮಪಾನ ಅಡ್ಡಾಗಳನ್ನು ಮಾಡಿಕೊಂಡು, ಧೂಮಪಾನ ಮಾಡದ ಅಮಾಯಕರ ಆರೋಗ್ಯದ ಮೇಲೆ ಪರಿಣಾಮ ಬೀರಿ ಅವರು ತಂಬಾಕಿನಿಂದ ಉಂಟಾಗುವ ಖಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಅಡ್ಡಾಗಳನ್ನು ಬಂದ್ ಮಾಡುವಂತೆ ಎಚ್ಚರಿಕೆ ನೀಡಿ ಕ್ರಮಕೈಗೊಳ್ಳಲಾಯಿತು.
ಈ ದಾಳಿಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ, ಪೊಲೀಸ್ ಇಲಾಖೆಯ ಮಹಾಂತೇಶ ರಾಥೋಡ್, ಎ.ಆರ್. ಪಾಟೀಲ್, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೈ.ಎನ್. ಕಡೆಮನಿ, ಬಿ.ಸಿ. ಚಿತ್ತರಗಿ ಮುಂತಾದವರಿದ್ದರು.