ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಥೋಡ್ ಮಾರ್ಗದರ್ಶನದಲ್ಲಿ ಜಿಲ್ಲೆಯ ಬೆಟಗೇರಿ ಭಾಗದಲ್ಲಿ, ರೋಣ ಪಟ್ಟಣದ ವಿವಿಧೆಡೆ ಕೋಟ್ಪಾ ದಾಳಿ ಹಮ್ಮಿಕೊಂಡು ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆ-2003 ಉಲ್ಲಂಘನೆಯ ಕುರಿತು ಜಾಗೃತಿ ಮೂಡಿಸಿ, ಎಚ್ಚರಿಕೆ ನೀಡಿ 49 ಪ್ರಕರಣಗಳನ್ನು ದಾಖಲಿಸಿ, ರೂ. 13,900 ದಂಡ ಸಂಗ್ರಹಿಸಲಾಯಿತು.
ಜಿಲ್ಲೆಯ ಕೆಲವು ಪಾನ್ ಬೀಡಾ ಅಂಗಡಿ, ಹೋಟೆಲ್, ಬಾರ್‌ಗಳಲ್ಲಿ ಅನಧಿಕೃತ ಧೂಮಪಾನ ಅಡ್ಡೆಗಳನ್ನು ಮಾಡಿಕೊಂಡು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದು, ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಅವರು ಸೇವಿಸಿ ಬಿಟ್ಟ ಹೊಗೆಯಿಂದ ಅಮಾಯಕರು ಕೂಡ ಅಪಾಯಕಾರಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯ, ಇತರ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ ಎಂದು ಡಾ. ವೆಂಕಟೇಶ ರಾಥೋಡ್ ಅರಿವು ಮೂಡಿಸಿದರು.
ರಾಜ್ಯ ಸರ್ಕಾರ ಮೇ 31, 2025ರಂದು ಮಹತ್ತರದ ನಿರ್ಣಯ ಕೈಗೊಂಡು, ಕೋಟ್ಪಾ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ್ದು, ಈ ಮೊದಲು ಸೆಕ್ಷನ್ 4 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ರೂ.200ವರೆಗೆ ದಂಡವಿರುವದನ್ನು, ಈಗ ದಂಡದ ಮೊತ್ತವನ್ನು ರೂ.1000ಗೆ ಏರಿಸಲಾಗಿದೆ. ಸೆಕ್ಷನ್ 6ಎ ಶಾಲಾ ಕಾಳೇಜುಗಳ ಸುತ್ತ 100 ಗಜದವರೆಗೆ ತಂಬಾಕು ಉತ್ಪನ್ನಗಳ ನಿಷೇಧ ಹಾಗೂ ಸೆಕ್ಷನ್ 6ಬಿ 18 ವರ್ಷದೊಳಗಿನ ಬದಲಿಗೆ 21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ನಿಷೇಧಿಸಲಾಗಿದ್ದು, ಈ ಸೆಕ್ಷನ್ ಅಡಿ ದಂಡದ ಮೊತ್ತವನ್ನು ರೂ.200ರಿಂದ ರೂ.1000ವರೆಗೆ ಹೆಚ್ಚಿಸಲಾಗಿದೆ.
ಶಾಲಾ-ಕಾಲೇಜುಗಳ ಸುತ್ತಲಿನ ತಂಬಾಕು ಮಾರಾಟಗಾರರು ಮಾರಾಟ ನಿಲ್ಲಿಸದಿದ್ದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವದೆಂದು ಜಿಲ್ಲಾ ಸಮೀಕ್ಷಣಾಧಿಕಾರಿಗಳು ತಿಳಿಸಿದರು.