ದಾವಣಗೆರೆ: ದಾವಣಗೆರೆ ದಕ್ಷಿಣ ಉಪಚುನಾವಣೆಯ ಮತದಾನ ಮುಗಿದಿದ್ದರೂ, ಕಾಂಗ್ರೆಸ್ ಪಕ್ಷದ ಒಳಗಿನ ಬಂಡಾಯ ಮತ್ತು ಗೊಂದಲ ಇನ್ನೂ ಶಮನವಾಗಿಲ್ಲ. ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ ಹಿನ್ನೆಲೆ ಆರಂಭವಾದ ಅಸಮಾಧಾನ, ಮತದಾನ ಬಳಿಕವೂ ಮುಂದುವರಿದಿದೆ.
ಈ ಬೆಳವಣಿಗೆಯ ನಡುವೆ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿರುವ ಹಾಗೂ ಎಂಎಲ್ಸಿಯಾಗಿರುವ ಅಬ್ದುಲ್ ಜಬ್ಬಾರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸದ ಆರೋಪದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಪಕ್ಷದ ಒಳಗೆ ಮತ್ತೊಂದು ಮುಸ್ಲಿಂ ಬಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಬಂದರೂ, ಅವರ ನಡೆ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಲಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ.
ಮುಸ್ಲಿಂ ನಾಯಕರ ಮನವೊಲಿಕೆಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಜಮೀರ್ ಅಹ್ಮದ್ ವಿರುದ್ಧ ಕೇಳಿಬಂದಿದೆ. ಇದೇ ವೇಳೆ, ಅಬ್ದುಲ್ ಜಬ್ಬಾರ್ ಕೂಡ ಪ್ರಚಾರದಿಂದ ದೂರ ಉಳಿದಿದ್ದರು.
ಯಾರು ಪ್ರಚಾರದಲ್ಲಿ ಭಾಗವಹಿಸಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದೊಳಗಿನ ಒಂದು ಬಣ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಜಬ್ಬಾರ್ ರಾಜೀನಾಮೆ ಸಲ್ಲಿಸಿರುವುದು ಗಮನಾರ್ಹವಾಗಿದೆ.
ಸಚಿವ ಜಮೀರ್ ಅಹ್ಮದ್ ಪ್ರಚಾರಕ್ಕೆ ಗೈರುಹಾಜರಾಗಿರುವ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದ್ದು, ಇದ ಕುರಿತು ವರದಿ ಸಲ್ಲಿಸಲಾಗಿದೆ.
ಉಪಚುನಾವಣೆಯ ಫಲಿತಾಂಶ ಹೊರಬಂದ ನಂತರ ಮುಸ್ಲಿಂ ನಾಯಕರ ಮಧ್ಯೆ ಅಸಮಾಧಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಸ್ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳ ಮತ ಹಂಚಿಕೆಯ ಪರಿಣಾಮವಾಗಿ ಪಕ್ಷದೊಳಗಿನ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.



