ವಿಜಯಸಾಕ್ಷಿ ಸುದ್ದಿ, ಗದಗ: ಮೂಲತಃ ಗದಗಿನ ಗಂಜಿ ಬಸವೇಶ್ವರ ಸರ್ಕಲ್ ಬಳಿಯ ನಿವಾಸಿ, ಸದ್ಯ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯ ನಂ. 1ರ 10ನೇ ತರಗತಿ ವಿದ್ಯಾರ್ಥಿನಿ ಕೃಷಿ ಸಂಗಮೇಶ ಮೆಣಸಿನಕಾಯಿ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಶಿಬಿರಕ್ಕೆ ಆಯ್ಕೆಯಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಾಧಕ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
ಮಾರ್ಚ್ 11ರಿಂದ 14ರವರೆಗೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ಪ್ರಾಂತ್ಯದಲ್ಲಿ ನಡೆಯಲಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ ಅಸ್ಟ್ರೋನೊಮಿ ಕ್ಯಾಂಪ್‌ಗೆ ಕೃಷಿ ಆಯ್ಕೆಯಾಗಿದ್ದಾಳೆ. ಕೃಷಿ, ಗದಗ ಮೂಲದ, ಸದ್ಯ ಹುಬ್ಬಳ್ಳಿಯಲ್ಲಿ ದಿ ಟೈಮ್ಸ್ ಆಫ್ ಇಂಡಿಯಾದ ವಿಶೇಷ ಪ್ರತಿನಿಧಿಯಾಗಿರುವ ಸಂಗಮೇಶ ಮೆಣಸಿನಕಾಯಿ ಅವರ ಪುತಿಯಾಗಿದ್ದಾಳೆ.
ಈ ಆಯ್ಕೆಗೆ ಕೇಂದ್ರೀಯ ವಿದ್ಯಾಲಯ ನಂ.1ರ ಶಿಕ್ಷಕರು ಏಪ್ರಿಲ್ 2024ರಲ್ಲಿ ಅನುದಾನದಲ್ಲಿ ಬೆಂಗಳೂರಿನ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಗೆ ವಿಜ್ಞಾನ ಪ್ರವಾಸ ಕರೆದೊಯ್ದಿದ್ದರು. ಅದೇ ವೇಳೆ ವಿಜ್ಞಾನಿಗಳಾದ ಪಿ. ವೀರಮುತುವೆಲ್, ನಿಗಾರ್ ಶಾಜಿ, ಪ್ರಶಾಂತ ಬಾಗಲಕೋಟ ಹಾಗೂ ಇತರರ ಜೊತೆ ಸಣ್ಣ ಸಂವಾದ ನಡೆಸಿದ್ದೆ. ಅವರ ಮಾತುಗಳಿಂದ ಅಂತರಿಕ್ಷ ಮತ್ತು ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಉಂಟಾಯಿತು. ಈ ಆಯ್ಕೆಯಲ್ಲಿ ನನ್ನ ಶಾಲೆ, ಪಿ.ಎಂ.ಶ್ರೀ ಅನುದಾನ, ಇಸ್ರೋ ಹಾಗೂ ಅಲ್ಲಿನ ವಿಜ್ಞಾನಿಗಳ ಪ್ರೇರಣೆಯೇ ಕಾರಣ ಎಂದು ಕೃಷಿ ತಿಳಿಸಿದ್ದಾಳೆ.
ಕೃಷಿ ಇದೇ ಶೈಕ್ಷಣಿಕ ವರ್ಷದಲ್ಲಿ ಕೇರಳದ ಎರ್ನಾಕುಲಂನಲ್ಲಿ ನಡೆದ ಕೇಂದ್ರೀಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 3,000 ಮೀ. ಮತ್ತು 1,500 ಮೀಟರ್ ಓಟಗಳಲ್ಲಿಯೂ ಬೆಂಗಳೂರು ಪ್ರಾದೇಶಿಕ ವಿಭಾಗವನ್ನು ಪ್ರತಿನಿಧಿಸಿ, ಸಮಾಧಾನಕರ ಬಹುಮಾನ ಪಡೆದಿರುವುದು ಗಮನಾರ್ಹ.



