ಅಂಧೇರಿ ಓಶಿವಾರಾದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಭಾರೀ ಬೆಳವಣಿಗೆ ನಡೆದಿದೆ. ಬಾಲಿವುಡ್ ನಟ ಹಾಗೂ ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್ ಅಲಿಯಾಸ್ ಕೆಆರ್ಕೆ ಅವರನ್ನು ಓಶಿವಾರಾ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ವಸತಿ ಕಟ್ಟಡದ ಮೇಲೆ ನಡೆದ ಫೈರಿಂಗ್ಗೆ ಬಳಸಲಾದ ಬಂದೂಕು ಕೆಆರ್ಕೆ ಅವರ ಲೈಸೆನ್ಸ್ ಪಡೆದ ವೈಯಕ್ತಿಕ ಬಂದೂಕು ಎಂಬುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದ ಪ್ರಮುಖ ಶಂಕಿತನಾಗಿ ಪರಿಗಣಿಸಲಾಗಿದೆ.
ಶುಕ್ರವಾರ ಸಂಜೆ ಕೆಆರ್ಕೆ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ತಾವು ಗುಂಡು ಹಾರಿಸಿದ್ದನ್ನು ಒಪ್ಪಿಕೊಂಡಿದ್ದು, ಲೈಸೆನ್ಸ್ ಬಂದೂಕನ್ನೇ ಬಳಸಿದ್ದಾಗಿ ಹೇಳಿದ್ದಾರೆ. ಆದರೆ, ಯಾರಿಗೂ ಹಾನಿ ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೆಆರ್ಕೆ ಅವರ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಜನವರಿ 18ರಂದು ನಳಂದ ಸೊಸೈಟಿಯ ವಸತಿ ಕಟ್ಟಡದ ಮೇಲೆ ಎರಡು ಗುಂಡುಗಳು ಹಾರಿದ ಘಟನೆ ನಡೆದಿದೆ. ಒಂದನ್ನು ಎರಡನೇ ಮಹಡಿಯಿಂದ, ಮತ್ತೊಂದನ್ನು ನಾಲ್ಕನೇ ಮಹಡಿಯಿಂದ ವಶಪಡಿಸಿಕೊಳ್ಳಲಾಗಿದೆ.
ಎರಡನೇ ಮಹಡಿಯಲ್ಲಿ ಬರಹಗಾರ-ನಿರ್ದೇಶಕ ನೀರಜ್ ಕುಮಾರ್ ಮಿಶ್ರಾ (45) ವಾಸವಿದ್ದು, ನಾಲ್ಕನೇ ಮಹಡಿಯಲ್ಲಿ ಮಾಡೆಲ್ ಪ್ರತೀಕ್ ಬೈದ್ ವಾಸಿಸುತ್ತಿದ್ದಾರೆ. ಫೈರಿಂಗ್ ಬಳಿಕ ಎರಡೂ ಫ್ಲಾಟ್ಗಳಲ್ಲಿ ಗುಂಡಿನ ಗುರುತುಗಳು ಕಂಡುಬಂದಿವೆ.
ಪ್ರಕರಣದ ತನಿಖೆಗೆ ಅಪರಾಧ ವಿಭಾಗದ ಹಲವು ತಂಡಗಳು ತೊಡಗಿಸಿಕೊಂಡಿದ್ದವು. ಆರಂಭದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಕೊರತೆಯಿಂದ ಸಾಕ್ಷ್ಯ ಸಂಗ್ರಹಕ್ಕೆ ಅಡ್ಡಿಯಾಗಿತ್ತು. ಆದರೆ ನಂತರ ವಿಧಿವಿಜ್ಞಾನ ವರದಿ ಮೂಲಕ ಗುಂಡುಗಳು ಕೆಆರ್ಕೆ ಅವರ ಬಂದೂಕಿನಿಂದಲೇ ಹೊರಬಂದಿರುವ ಸಾಧ್ಯತೆಯನ್ನು ಪೊಲೀಸರು ದೃಢಪಡಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ.



