ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಮಾಧ್ಯಮದವರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ KSDMF ಖಂಡಿಸಿದ್ದು, ಕಾನೂನು ಕ್ರಮಕ್ಕೆ ಗೃಹ ಸಚಿವರಿಗೆ ಒತ್ತಾಯ ಮಾಡಲಾಗಿದೆ. ಈ ಬಗ್ಗೆ KSDMF ಅಧ್ಯಕ್ಷ ಸಮೀವುಲ್ಲಾ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಸಗರಹಳ್ಳಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಧರ್ಮಸ್ಥಳದಲ್ಲಿ ಕಾರ್ಯನಿರತರಾಗಿದ್ದ ಡಿಜಿಟಲ್ ಮಾದ್ಯಮದ ಮೇಲೆ ಮತ್ತು ಇತರೆ ಪತ್ರಕರ್ತರ ಮೇಲೂ ಕೆಲವು ಪುಂಡರು ನಡೆಸಿರುವ ಹಲ್ಲೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಇದಾಗಿದೆ. ಇನ್ನೂ ವಸ್ತು ಸ್ಥಿತಿಯನ್ನು ವರದಿ ಮಾಡಲು ಹೋದ ಡಿಜಿಟಲ್ ಮಾದ್ಯಮದ ಪತ್ರಕರ್ತರನ್ನು ಈ ಗುಂಪು ಟಾರ್ಗೆಟ್ ಮಾಡಿರುವುದು ಹೇಯ ಕೃತ್ಯವಾಗಿದ್ದು, ಧರ್ಮಸ್ಥಳದ ಘನತೆಗೆ ಈ ಪುಂಡರು ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿದರು.
ಧರ್ಮಸ್ಥಳದಲ್ಲಿ ನಡೆದಿರುವ ವಿದ್ಯಮಾನಗಳು ದೇಶದ ಗಮನ ಸೆಳೆದಿದ್ದು, ಸಹಜವಾಗಿ ಡಿಜಿಟಲ್ ಮಾಧ್ಯಮಗಳೂ ಸಹ ವರದಿ ಮಾಡಲು ಹೋಗಿದ್ದರಲ್ಲಿ ತಪ್ಪೇನಿದೆ? ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ ಆಗಿದೆ. ಚಾನೆಲ್ ನ ವರದಿಗಾರರ ಮೇಲೂ ಹಲ್ಲೆ ನಡೆದಿದ್ದು ಇದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದಿದ್ದಾರೆ.
ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ಹಲ್ಲೆ ನಡೆಸಿದ ಪುಂಡರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು. ಡಿಜಿಟಲ್ ಮಾಧ್ಯಮವು ಸೇರಿ ಹಲವು ಮಾಧ್ಯಮಗಳ ಪ್ರತಿನಿಧಿಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ರಕ್ಷಣೆ ನೀಡಬೇಕು ಎಂದು ರಾಜ್ಯದ ಗೃಹ ಮಂತ್ರಿ ಡಾ. ಜಿ.ಪರಮೇಶ್ವರ್ ಅವರನ್ನು ಆಗ್ರಹಪಡಿಸುತ್ತೇವೆ. ಇದೊಂದು ಸೂಕ್ಷ್ಮ ವಿಚಾರ ಆಗಿದ್ದು, ವರದಿ ಮಾಡಬೇಕಾದರೆ ಸಮತೋಲನ ಮತ್ತು ಸಂಯಮದಿಂದ ವರದಿ ಮಾಡಬೇಕೆಂದು ವೃತ್ತಿ ಬಾಂಧವರನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ KSDMFನ ಎಲ್ಲಾ ಪದಾಧಿಕಾರಿಗಳು ಇದ್ದರು.