ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಿವನ ಆರಾಧನೆಯ ಶಿವರಾತ್ರಿಯ ದಿನ ಸ್ಥಳೀಯ ಎಲ್ಲ ಶಿವನ ದೇವಸ್ಥಾನಗಳು ಭಕ್ತರ ಪರಾಕಾಷ್ಠೆಯಲ್ಲಿ ತುಂಬಿ ತುಳುಕುತ್ತಿತ್ತು. ಶಿವನ ಪೂಜೆಗಾಗಿ ಭಕ್ತರು ಬಿಲ್ವಪತ್ರೆ, ಹೂವು, ವಿವಿಧ ಹಣ್ಣುಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವ ದೃಶ್ಯ ಎಲ್ಲ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿತ್ತು.
ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಬುಧವಾರ ಮಹಾಶಿವರಾತ್ರಿ ನಿಮಿತ್ತ ಶ್ರೀ ಸೋಮೇಶ್ವರನಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ, ಮಂಗಳಾರತಿ ಜರುಗಿತು. ಈ ವೇಳೆ ಅರ್ಚಕ ಕೃಷ್ಣಾ ಗ್ರಾಮಪುರೋಹಿತ ಮಾತನಾಡಿ, ಶಿವನನ್ನು ಮೆಚ್ಚಿಸಲು ಕಠೋರ ತಪಸ್ಸು ಮಾಡಬೇಕಿಲ್ಲ. ಕಠಿಣ ಉಪವಾಸ ಅಗತ್ಯವಿಲ್ಲ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಭಕ್ತಿಯಿಂದ ಶಿವನಿಗೆ ಜಲಾಭಿಷೇಕ ಮಾಡಿದರೆ ಶಿವನು ಪ್ರಸನ್ನನಾಗುತ್ತಾನೆ. ಶಿವನನ್ನು ಜಲಾಭಿಷೇಕಪ್ರಿಯ ಎಂದು ಕರೆಯುತ್ತಾರೆ. ಅಭಿಷೇಕ ಮಾಡುವುದರಿಂದ ಹೃದಯ ಮತ್ತು ಆತ್ಮವನ್ನು ಶುದ್ಧವಾಗಿತ್ತದೆ ಮತ್ತು ಪವಿತ್ರಗೊಳಿಸುತ್ತದೆ, ಜನ್ಮಜನ್ಮಾಂತರದ ಪಾಪಗಳು ದೂರವಾಗುತ್ತದೆ ಎಂದರು.
ಈ ವೇಳೆ 11 ಜನ ಋತ್ವಿಜರು ರುದ್ರ ಪಠಿಸುತ್ತ ಸೋಮೇಶ್ವರನಿಗೆ ಕ್ಷೀರಾಭಿಷೇಕ ಹಾಗೂ ಜಲಾಭಿಷೇಕ ಮಾಡಿದರು. ಶ್ರೀವಲ್ಲಭಶಾಸ್ತ್ರಿ ಸದರಜೋಶಿ, ಎ.ಜಿ. ಕುಲಕರ್ಣಿ, ಎಸ್.ಆರ್. ಕುಲಕರ್ಣಿ, ವಿಶ್ವನಾಥಭಟ್ ಗ್ರಾಮಪುರೊಹಿತ, ಆದರ್ಶ ಕುಲಕರ್ಣಿ, ಅಜಿತ ಕುಲಕರ್ಣಿ, ಮಂಜುನಾಥ ಗ್ರಾಮಪುರೋಹಿತ, ನಾಗೇಶಭಟ್ ಗ್ರಾಮಪುರೋಹಿತ, ರಾಮಕೃಷ್ಣ ಸದರಜೋಶಿ, ಎ.ಎ. ಕುಲಕರ್ಣಿ, ನಾಗರಾಜ ನಾಡಿಗೇರ, ಗಿರೀಶ ಕುಲಕರ್ಣಿ, ಹರೀಶ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಮುಕುಂದ ಸೂರ್ಯಭಟ್, ಸುಮಂತ ಗ್ರಾಮಪುರೋಹಿತ, ಪವನ ಗ್ರಾಮಪುರೋಹಿತ ಸೇರಿದಂತೆ ಸುಮಂಗಲೆಯರು ಇದ್ದರು.