ಚಿಕ್ಕಮಗಳೂರು:- KSRTC ಬಸ್ ಚಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಚಾಲಕ ಬರೆದಿದ್ದ ಡೆತ್ ನೋಟ್ ನಲ್ಲಿ ಮೇಲಾಧಿಕಾರಿ ಕಿರುಕುಳದ ಬಗ್ಗೆ ಉಲ್ಲೇಖ ಮಾಡಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ಕೆಎಸ್ಆರ್‌ಟಿಸಿ ಚಾಲಕನನ್ನು ಚಂದ್ರು ಎಂದು ಗುರುತಿಸಲಾಗಿದೆ. ಮೇಲಾಧಿಕಾರಿ ಪುಟ್ಟಸ್ವಾಮಿ ವಿರುದ್ಧ ಡೆತ್‌ನೋಟ್ ಬರೆದಿಟ್ಟು, ಕಡೂರು ಡಿಪೋದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹುಷಾರಿಲ್ಲದೇ ಕೆಲಸಕ್ಕೆ ಬಾರದಿದ್ದಕ್ಕೆ ಹಾಜರಾತಿಯಲ್ಲಿ ಗೈರು ಹಾಕಿದ್ದಾರೆ. ನನ್ನ ಖಾತೆಯಲ್ಲಿ ಸಾಕಷ್ಟು ರಜೆ ಇದೆ. ಆದ್ರೂ ಗೈರು ಹಾಕಿದ್ದಾರೆ. ಆದರೆ ಹಣ ಕೊಟ್ಟವರಿಗೆ ಎಷ್ಟು ದಿನ ರಜೆ ಬೇಕಾದ್ರೂ ಕೊಡ್ತಾರೆ ಎಂದು ಎಟಿಎಸ್ ಪುಟ್ಟಸ್ವಾಮಿ ವಿರುದ್ಧ ಆರೋಪ ಮಾಡಿದ್ದಾರೆ.
ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಚಂದ್ರುನನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟಸ್ವಾಮಿಯಿಂದ ನೌಕರರ ಮೇಲಾಗುತ್ತಿರುವ ದೌರ್ಜನ್ಯ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.