ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಕ್ಷ್ಮೇಶ್ವರ ಸಾರಿಗೆ ಘಟಕದ ಹಲವು ಬಸ್ಸುಗಳು ಹಳದಿ-ಕೆಂಪು ಬಣ್ಣದೊಂದಿಗೆ ಅಲಂಕಾರಗೊಂಡಿದ್ದವು. ವಿಶೇಷವಾಗಿ ಘಟಕದ ಚಾಲಕ ಎನ್.ಜಿ. ಬೇನಾಳ ಅವರು ತಾವು ಚಾಲನೆ ಮಾಡುವ ಬಸ್ಸನ್ನು ಸಂಪೂರ್ಣವಾಗಿ ಕನ್ನಡದ ತೇರನ್ನಾಗಿಸಿದ್ದರು.
ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಕೆಂಪು-ಹಳದಿ ಬಲೂನ್, ರಿಬ್ಬನ್, ಬಾಳೆಕಂಬ ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಬಸ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಕನ್ನಡ ಕವಿಗಳ, ಸಾಹಿತಿಗಳ ಭಾವಚಿತ್ರಗಳು, ಅಲ್ಲದೆ ಬಸ್‌ನ ಸೀಟುಗಳನ್ನು ಕೆಂಪು-ಹಳದಿ ಬಣ್ಣ ಕಾಣುವಂತೆ ಸಿಂಗರಿಸಿದ್ದರು. ಬಸ್ಸಿನ ಅಲಂಕಾರಕ್ಕೆ ಕುಟುಂಬಸ್ಥರೂ ಸಹಕಾರ ನೀಡಿದರು.
ಚಾಲಕರ ಈ ಕನ್ನಡ ಪ್ರೀತಿಗೆ ಘಟಕ ವ್ಯವಸ್ಥಾಪಕರಾದ ಸವಿತಾ ಆದಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಯಾಣಿಕರು ಬಸ್ಸಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಘಟಕದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಡಿ.ಎಚ್. ಸೊರಟೂರ ಕನ್ನಡ ಗೀತೆಗಳನ್ನು ಹಾಡಿ ಮನರಂಜಿಸಿದರು.


