ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶಿರಾಡಿಘಾಟ್ನ ಗುಂಡ್ಯ ಸಮೀಪ KSRTC ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಭೀಕರ ಮುಖಾಮುಖಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರು ಉಜಿರೆ ನಿವಾಸಿಗಳಾದ ಶ್ರೀಧರ ಮರಕಡ, ಜನಾರ್ದನ ಕೆರಿಮಾರ್ ಮತ್ತು ಕೊಕ್ಕಡ ನಿವಾಸಿ ಚಂದ್ರಶೇಖರ ಗೌಡರಾಗಿದ್ದಾರೆ. ಕಾರಿನಲ್ಲಿ ಮತ್ತೊಬ್ಬ ಸುರೇಶ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ನಾಲ್ವರು ಕಾರಿನಲ್ಲಿ ಸಕಲೇಶಪುರದಲ್ಲಿ ಮದುವೆ ಮುಗಿಸಿಕೊಂಡು ಉಜಿರೆ ಕಡೆಗೆ ವಾಪಸ್ ಪ್ರಯಾಣಿಸುತ್ತಿದ್ದರು. ಬಸ್ ಮಂಗಳೂರು ಕಡೆಯಿಂದ ಧರ್ಮಸ್ಥಳ-ತಿರುಪತಿ ಮಾರ್ಗದಲ್ಲಿ ಬಂದಿದ್ದು, ಶಿರಾಡಿಘಾಟ್ನ ಗುಂಡ್ಯ ಸಮೀಪ ಕಾರಿನೊಂದಿಗೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಕ್ಷಣ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬೆನ್ನಲ್ಲೇ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು, ನಂತರ ಪೊಲೀಸರು ವಾಹನ ಸಂಚಾರಕ್ಕೆ ಪುನಃ ಅನುಮತಿ ನೀಡಿದ್ದಾರೆ.

