ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಸಂಸ್ಥೆಯ ಐರಾವತ ಬಸ್ಸಿಗೆ ಬೆಂಕಿ ಹೊತ್ತಿಕೊಂಡ ಘಟನೆ ದ.ಕ ಜಿಲ್ಲೆಯ ಉಪ್ಪಿನಂಗಡಿ ಹಳೆಗೇಟು ಬಳಿ ಜು.18ರ ಬೆಳಗ್ಗೆ ನಡೆದಿದ್ದು, ಸ್ಥಳೀಯ ಯುವಕರ ಸಕಾಲಿಕ ಪ್ರಯತ್ನದಿಂದ ಬೆಂಕಿ ಆರಿಸಿ ಸಂಭವಿಸಬಹುದಾಗಿದ್ದ ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.
ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದಾನೆ. ಆಗ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ.
ಆಗ ಅಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿಯಾದ ಇಸಾಕ್, ಇಟ್ಬಾಲ್, ಸ್ಥಳೀಯರಾದ ಜಾಯಿ, ಸ್ನೇಕ್ ಝಕಾರಿಯಾ, ಸಿದ್ದೀಕ್ ಕೊಪ್ಪಳ ಸೇರಿದಂತೆ ಅಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರನ್ನು ಬಸ್ಸಿಗೆ ಎರಚಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಬಸ್ಸಿನ ಹಿಂಬದಿಗೆ ಹಾನಿಯಾಗಿದೆ. ಮಳೆಗಾಲದ ಈ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಹೊಂಡ- ಗುಂಡಿಯಲ್ಲಿ ನೀರು ತುಂಬಿದ್ದರಿಂದ ಇದು ಬೆಂಕಿ ನಂದಿಸಲು ತಕ್ಷಣದ ನೆರವಿಗೆ ಬಂದಿದೆ.