ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಂಜಾರ ಸಮಾಜದ ಗುರುಗಳೆಂದು ಹೇಳಿಕೊಂಡು ಆದ್ರಳ್ಳಿ ಗವಿಮಠದಲ್ಲಿ ಬೀಡು ಬಿಟ್ಟಿರುವ ಸವಣೂರ ತಾಲೂಕಿನ ಕೃಷ್ಣಾಪೂರದಲ್ಲಿದ್ದ ಕುಮಾರ ಮಹಾರಾಜರು ಬಂಜಾರ ಸಮಾಜದ ಒಗ್ಗಟ್ಟು ಒಡೆಯುವ ಮತ್ತು ಇತರೇ ಜಾತಿಯವರೊಂದಿಗೆ ಕಲಹ ಉಂಟು ಮಾಡುತ್ತಿದ್ದು, ಕುಮಾರ ಮಹಾರಾಜರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡುವಂತೆ ಬಂಜಾರ ಸಮಾಜದ ಅಧ್ಯಕ್ಷ ಶಿವಣ್ಣ ಲಮಾಣಿ, ಮುಖಂಡರಾದ ರಾಮಣ್ಣ ಲಮಾಣಿ(ಶಿಗ್ಲಿ), ಗುರಪ್ಪ ಲಮಾಣಿ, ದೇವಪ್ಪ ಲಮಾಣಿ ಹೇಳಿಕೆ ನೀಡಿದರು.
ಬುಧವಾರ ಪಟ್ಟಣದಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳ ಬಂಜಾರ ಸಮಾಜ ಬಾಂಧವರ ಮುಖಂಡರು ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ, ಕುಮಾರ ಮಹಾರಾಜರು ಬಂಜಾರ ಸಮಾಜದ ಸ್ವಾಮಿಯಲ್ಲ. ಸ್ವಯಂಘೋಷಿತ ಸ್ವಾಮಿಯಾಗಿದ್ದು, ಬಂಜಾರ ಸಮಾಜಕ್ಕೂ ಇವರಿಗೂ ಯಾವುದೇ ಸಂಬಂಧವಿಲ್ಲ. ಸಮಾಜದಿಂದ ಇವರಿಗೆ ಪಟ್ಟಾಭಿಷೇಕವಾಗಿಲ್ಲ. ಬೇರೆಡೆಯಿಂದ ಇಲ್ಲಿ ನೆಲೆಸಿ ಬಂಜಾರ ಸಮಾಜದ ಪರಮಪೂಜ್ಯರು ಎಂದು ಬಿಂಬಿಸಿಕೊಂಡಿದ್ದಾರೆ. ಭೋವಿ ಜನಾಂಗ ಮತ್ತು ಬಂಜಾರ ಸಮಾಜದ ನಡುವೆ ಪರಸ್ಪರ ಕಲಹ, ತ್ವೇಷಮಯ ವಾತಾವರಣ ಉಂಟು ಮಾಡುತ್ತಿದ್ದಾರೆ. ಸಮಾಜ ಬಾಂಧವರು ಶಿರಹಟ್ಟಿಯಲ್ಲಿ ನಡೆದ ಸೇವಾಲಾಲ್ ಜಯಂತಿಗೆ ಬರುವುದನ್ನು ತಡೆದಿದ್ದಾರೆ. ಕಲ್ಲು ಉಸುಕಿನ ವ್ಯವಹಾರ ಮಾಡುವವರನ್ನು ಪೊಲೀಸರಿಗೆ ಹೇಳಿ ಹಿಡಿಸುತ್ತಾರೆ ಎಂದು ದೂರಿದರು.
ಈ ವೇಳೆ ಸಮಾಜದ ಮುಖಂಡರಾದ ಜಾನು ಲಮಾಣಿ, ಈರಣ್ಣ ಚವ್ಹಾಣ, ಈಶಪ್ಪ ಲಮಾಣಿ, ಟೋಪಣ್ಣ ಲಮಾಣಿ, ಮಲ್ಲೇಶಪ್ಪ ಲಮಾಣಿ, ಸೋಮು ಲಮಾಣಿ, ರಮೇಶ ಲಮಾಣಿ, ಪುಂಡಲೀಕ ಲಮಾಣಿ, ಸೋಮರಡ್ಡಿ ಲಮಾಣಿ, ಪುಟ್ಟಪ್ಪ ಲಮಾಣಿ, ಲಕ್ಷ್ಮಣ ಚವ್ಹಾಣ, ಗಣೇಶ ಲಮಾಣಿ, ಥಾವರೆಪ್ಪ ಲಮಾಣಿ, ಖೀಮಪ್ಪ ಲಮಾಣಿ, ವೆಂಕಪ್ಪ ಲಮಾಣಿ, ಲಕ್ಷ್ಮಣ ಲಮಾಣಿ ಸೇರಿದಂತೆ ಬಂಜಾರ ಸಮಾಜದ ಮುಖಂಡರು, ಯುವಕರು ಇದ್ದರು.
ಆದರಹಳ್ಳಿ ಗವಿಮಠ ಎಲ್ಲ ಸಮಾಜದವರು ನಡೆದುಕೊಳ್ಳುವ ಕ್ಷೇತ್ರವಾಗಿದೆ. ಆದರಳ್ಳಿ ಗವಿಮಠ ಕೊಪ್ಪಳದ ಗವಿ ಸಿದ್ದೇಶ್ವರಮಠದ ಶಾಖಾ ಮಠ ಎಂದು ಹೇಳಿಕೊಂಡು ಗವಿಮಠಕ್ಕೂ ತಿಳಿಸದೆ ಆದರಳ್ಳಿಯಲ್ಲಿ ಬಂದು ತಾನು ಬಂಜಾರ ಸಮಾಜದ ಸ್ವಾಮೀಜಿ ಎಂದು ಹೇಳಿಕೊಂಡು ಅನಧಿಕೃತವಾಗಿ ಗವಿಮಠದಲ್ಲಿ ಬೀಡುಬಿಟ್ಟಿದ್ದಾರೆ. ಸಮಾಜದ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ರಾಜಕೀಯ ಮಾಡುತ್ತಿರುವ ಇವರನ್ನು ಸಮಾಜದವರು ಬಹಿಷ್ಕಾರ ಹಾಕುವ ಮುನ್ನ ಅವರೇ ಮಠ ಬಿಟ್ಟು ತೆರಳಬೇಕು. ಇವರನ್ನು ಗಡಿಪಾರು ಮಾಡುಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸುತ್ತೇವೆ ಎಂದರು.