ಮಂಡ್ಯ:- ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಕಾರು ವಿಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದ ಕೇಂದ್ರ ಸಚಿವ HD ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಚಲುವರಾಯಸ್ವಾಮಿ, ಕುಮಾರಸ್ವಾಮಿ ನನಗೆ ಕಾರು ಕೊಟ್ಟಿಲ್ಲ ಎಂದು ಹೇಳಿರೋದು ನೋಡಿದ್ರೆ ಅದನ್ನು ಕೇಳಲು ಆಗುತ್ತಿಲ್ಲ. ಕುಮಾರಸ್ವಾಮಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಳಸುತ್ತಿದ್ದ ಕಾರನ್ನು ನನಗೆ ಬೇಡ ಅಂದಿದ್ದಾರೆ. ನಾವು ಏನು ಮಾಡಲು ಸಾಧ್ಯ, ಸುಮಲತಾ ಬಳಸುತ್ತಿದ್ದ ಕಾರನ್ನು ಕುಮಾರಸ್ವಾಮಿ ಏಕೆ ಬೇಡ ಎಂದಿದ್ದಾರೆ ಗೊತ್ತಿಲ್ಲ. ನಾವು ಕಾರು ಕೊಡಲ್ಲ ಎಂದು ಹೇಳಿಲ್ಲ, ಅವರೇ ಕಾರು ಬೇಡ ಎಂದಿದ್ದಾರೆ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
ನಮಗೂ ಸಹ ಹೊಸ ಕಾರು ಬರಲು ಒಂದು ವರ್ಷವಾಗಿದೆ. ಅಲ್ಲಿಯವರೆಗೆ ಹಿಂದೆ ಉಪಯೋಗಿಸುತ್ತಿದ್ದ ಸಚಿವರ ಕಾರನ್ನು ನಾನು ಬಳಸುತ್ತಿದ್ದೆ. ನಾನು ಸಂಸದನಾದ ಬಳಿಕ ಒಂದು ವರ್ಷ ಅಂಬರೀಶ್ ಅವರ ಕಾರನ್ನು ಬಳಸಿದ್ದೆ. ಆ ಮೇಲೆ ನನಗೆ ಹೊಸ ಕಾರು ಬಂತು. ಹೊಸ ಸಂಸದರಿಗೆ ಹಳೆ ಕಾರನ್ನು ಮೊದಲು ನೀಡುವುದು ವಾಡಿಕೆ. ಬಳಿಕ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಪಡೆದು ಹೊಸ ಕಾರು ಖರೀದಿಸಿ ಕೊಡಲಾಗುತ್ತದೆ. ಆದರೆ ಕುಮಾರಸ್ವಾಮಿ ನೋಡಿದರೆ ಸುಮಲತಾ ಅಂಬರೀಶ್ ಬಳಸಿದ ಕಾರನ್ನು ಬೇಡ ಅಂದಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಇನ್ನೂ ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲಿ ಕುಚುಕುಗಳ ರೀತಿ ಇದ್ದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಚಲುವರಾಯಸ್ವಾಮಿ ಇದೀಗ ಬದ್ಧ ವೈರಿಗಳಾಗಿ ಬದಲಾಗಿದ್ದಾರೆ. ಇಬ್ಬರ ನಡುವೆ ಈಗ ಒಂದಲ್ಲ ಒಂದು ವಿಚಾರಕ್ಕೆ ಮಾತಿನ ಯುದ್ಧ ನಡೆಯುತ್ತಿದೆ.
ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ!?
ಕಳೆದ ವಾರ ರಾಜ್ಯ ಪ್ರವಾಸದ ವೇಳೆ, ರಾಜ್ಯ ಸರ್ಕಾರ ಕಾರು ಒದಗಿಸಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಅಲ್ಲದೆ, ಕೇಂದ್ರ ಸರ್ಕಾರದ ವಾಹನದಲ್ಲೇ ಮಂಡ್ಯ, ಮೈಸೂರು ಜಿಲ್ಲೆ ಪ್ರವಾಸ ಮಾಡಿದ್ದರು. ರಾಜ್ಯ ಸರ್ಕಾರ ನನಗೆ ಈವರೆಗೂ ಕಾರು ಕೊಟ್ಟಿಲ್ಲ. ಹೀಗಾಗಿ, ನಮ್ಮ ಕೇಂದ್ರ ಸರ್ಕಾರದ ವಾಹನ ಬಳಕೆ ಮಾಡುತ್ತಿದ್ದೇನೆ. ಬೃಹತ್ ಕೈಗಾರಿಕಾ ಇಲಾಖೆಯ ವಾಹನ ತರಿಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.