ಬೆಂಗಳೂರು: ಕುಮಾರಸ್ವಾಮಿ ಅವರು ಬಹಳ ದೊಡ್ಡವರು, ಅವರು ಯಾರ ಬೆಂಬಲವನ್ನೂ ಪಡೆಯುವುದಿಲ್ಲ, ಒಕ್ಕಲಿಗರ ಮಠ, ಒಕ್ಕಲಿಗರ ಸಂಘ, ಒಕ್ಕಲಿಗ ಜಾತಿಯನ್ನು ಎಂದೂ ಉಪಯೋಗಿಸಿಕೊಂಡಿಲ್ಲ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಛೇಡಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
ನಿಮ್ಮ ಪರವಾಗಿ ಸ್ವಾಮೀಜಿಗಳು ಧ್ವನಿ ಎತ್ತಿರುವುದಕ್ಕೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ ಎಂದು ಕೇಳಿದಾಗ, “ಹೌದಾ.. ಪಾಪ, ಕುಮಾರಣ್ಣನಿಗೆ ಒಕ್ಕಲಿಗರ ಎರಡನೇ ಮಠ ಹೇಗಾಯ್ತು ಎಂಬುದು ಗೊತ್ತಿಲ್ಲವೇ? ಅದನ್ನು ಕಟ್ಟಿದವರು ಯಾರು? ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗುತ್ತಿದ್ದರೇ? ಅಂದು ದೇವೇಗೌಡರ ಪರ ಸ್ವಾಮೀಜಿಗಳು ರಸ್ತೆಗೆ ಇಳಿಯಲಿಲ್ಲವೇ? ಸದಾನಂದಗೌಡರಿಗೆ ತೊಂದರೆ ಆದಾಗ ಸ್ವಾಮೀಜಿಗಳು ಸುಮ್ಮನೆ ಕೂತಿದ್ದರಾ? ಕೆಲವು ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಬೇರೆ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಬೇಸರ ಮಾಡಿಕೊಂಡಿದ್ದೇನಾ?” ಎಂದು ತಿರುಗೇಟು ನೀಡಿದರು.
ನಾನು ಸ್ವಾಮೀಜಿ ಬೆಂಬಲ ಕೇಳಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಕೇಳಿದ್ದೇನಾ? ನಾನು ಕೂಡ ಯಾರ ಬೆಂಬಲ ಕೇಳಿಲ್ಲ.ಅವರು ಪ್ರೀತಿಯಿಂದ ಮಾತಾಡಿದರೆ ಬೇಡ ಎನ್ನಲು ಸಾಧ್ಯವೇ..? ನಾನು ಒಂದು ಸಮುದಾಯದಲ್ಲಿ ಹುಟ್ಟಿದ್ದರೂ ಎಲ್ಲಾ ಸಮುದಾಯಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ.
ಬಾಳೆಹೊನ್ನೂರು ಸ್ವಾಮಿಜಿ, ಶ್ರೀಶೈಲ ಸ್ವಾಮೀಜಿಗಳು ಸೇರಿದಂತೆ ಸಾಕಷ್ಟು ಸ್ವಾಮೀಜಿಗಳು ನನ್ನ ಪರ ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಪ್ರೀತಿ, ವಿಶ್ವಾಸ ಇದೆ. ಹೀಗಾಗಿ ಮಾತನಾಡಿದ್ದಾರೆ. ಜೈನ ಸ್ವಾಮೀಜಿಗಳು ಕೂಡ ದೊಡ್ಡ ಸಮಾವೇಶದಲ್ಲಿ ಬಹಿರಂಗವಾಗಿ ಆಶೀರ್ವಾದ ಮಾಡಿದರು. ಧರ್ಮಸ್ಥಳಕ್ಕೆ ಹೋದಾಗಲೂ ನನಗೆ ಬೆಂಬಲ ನೀಡಿದರು. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ?” ಎಂದು ಪ್ರಶ್ನಿಸಿದರು.


