ಬೆಳಗಾವಿ:- ಕುಂಭಮೇಳ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರು ಕುಟುಂಬದವರಿಗೆ ಉತ್ತರ ಪ್ರದೇಶ ಸರ್ಕಾರದಿಂದ ತಲಾ 25 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಇತ್ತೀಚೆಗೆ ನಡೆದಿದ್ದ ಮಹಾ ಕುಂಭಮೇಳದ ಸಂದರ್ಭ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಕುಟುಂಬದವರಿಗೆ ಉತ್ತರ ಪ್ರದೇಶ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ವಿತರಿಸಿದೆ. ಮೃತಪಟ್ಟವರ ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ಪರಿಹಾರ ಮೊತ್ತ ಜಮೆ ಮಾಡಲಾಗಿದೆ.
ಬೆಳಗಾವಿ ಮೂಲದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ, ಅರುಣ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು. ಘಟನೆ ಸಂಭವಿಸಿದ 40 ದಿನಗಳ ಬಳಿಕ ಉತ್ತರ ಪ್ರದೇಶ ಸರ್ಕಾರದಿಂದ ಪರಿಹಾರದ ಹಣ ವಿತರಣೆ ಮಾಡಲಾಗಿದೆ.
ಇತ್ತ ಕರ್ನಾಟಕ ಸರ್ಕಾರದಿಂದಲೂ ಪರಿಹಾರ ನೀಡುವಂತೆ ವರದಿ ರವಾನೆ ಮಾಡಲಾಗಿದೆ ಎಂದು ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.