ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನಾಗಾವಿ ಗ್ರಾಮದಲ್ಲಿ ಕಳೆದ 44 ವರ್ಷಗಳಿಂದ ಶ್ರಾವಣ ಮಾಸದಲ್ಲಿ ಕನ್ನೂರಬಸವೇಶ್ವರ ದೇವಸ್ಥಾನದಲ್ಲಿ ಸಾಗಿ ಬಂದಿರುವ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಹಾಗೂ 14 ವರ್ಷಗಳಿಂದ ನಡೆದುಬಂದಿರುವ ಕನ್ನೂರಬಸವೇಶ್ವರ ಜಾತ್ರಾ ಮಹೋತ್ಸವ ನೂರಾರು ಮಹಿಳೆಯರ ಕುಂಭ ಮೆರವಣಿಗೆ, ಕನ್ನೂರಬಸವೇಶ್ವರರ ಪಾಲಿಕೆಯೊಂದಿಗೆ ಜರುಗಿತು.
ಕುಂಭಗಳನ್ನು ಹೊತ್ತ ಮಹಿಳೆಯರು ಗ್ರಾಮದ ಗಂಗಾಧರೇಶ್ವರ ಯುವಕ ಮಂಡಳದವರ ಜಾಂಜ್ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕನ್ನೂರಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನ ಮೂರ್ತಿಗೆ ಜಲಾಭಿಷೇಕ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಗಂಗಾಧರೇಶ್ವರ ಮಠದ ಪೂಜ್ಯರಾದ ವೇದಮೂರ್ತಿ ಮೃತ್ಯುಂಜಯ ಸ್ವಾಮೀಜಿ ಹಿರೇಮಠ ಅವರಿಗೆ ಪುರಾಣ ಸಮಿತಿ ಸದಸ್ಯರು ತುಲಾಭಾರ ನೆರವೇರಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು.
ಪುರಾಣ ಸಮಿತಿಯ ಮುಖ್ಯಸ್ಥರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ ಕಾರ್ಯಕ್ರಮಗಳು ಸಾಗಿ ಬಂದಿರುವ ಮಾಹಿತಿ ನೀಡಿದರು. ಗ್ರಾಮದ ಬಸವೇಶ್ವರ ಭಜನಾ ಸಂಘದವರು ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.