ಚಿಕ್ಕಮಗಳೂರು:- ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿದೆ.
ವಗಡೆ, ಕಾನೂರು, ಬಾಳೆಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ, ಹೊರಬೈಲು, ನೇರ್ಲೆ, ಗೋಣಿಕೊಪ್ಪ, ಚಿಟ್ಟಿಕೊಡಿಗೆ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಈ ಸಲಗವು ಭತ್ತದ ಗದ್ದೆ, ಅಡಕೆ ತೋಟ, ಬಾಳೆ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಹಗಲು ಕಾಡಿನಲ್ಲಿ ಅಡಗಿಕೊಂಡು ರಾತ್ರಿ ಹೊತ್ತಿನಲ್ಲಿ ಗ್ರಾಮಗಳಿಗೆ ನುಗ್ಗುವ ಈ ಸಲಗದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಗ್ರಾಮಗಳ ಜನರು ಹಲವು ಬಾರಿ ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರು.
ಹೀಗಾಗಿ ಈ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದರು. ಹೀಗಾಗಿ ಸಲಗವನ್ನು ಹಿಡಿಯಲು ಸಕ್ರೆಬೈಲಿನಿಂದ ಮೂರು ಆನೆಗಳು ಮತ್ತು ಕುಶಾಲನಗರದ ದುಬಾರೆಯಿಂದ ಮೂರು ಆನೆಗಳು ಸೇರಿ ಒಟ್ಟು ಆರು ಆನೆಗಳು ಗುಡ್ಡಹಳ್ಳಕ್ಕೆ ಆಗಮಿಸಿವೆ.
ಕೊಪ್ಪ ಡಿಎಫ್ಒ ಅವರ ಮಾರ್ಗದರ್ಶನದಲ್ಲಿ ಎಲಿಫಂಟ್ ಟಾಸ್‌ಫೋರ್ಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದಾರೆ. ಕಳೆದ 15 ದಿನಗಳಿಂದ ಸಲಗದ ಚಲನವಲನವನ್ನು ಟ್ರ್ಯಾಕ್ ಮಾಡಲಾಗಿದ್ದು, ಆನೆಯನ್ನು ಶೀಘ್ರದಲ್ಲೇ ಹಿಡಿಯುವ ವಿಶ್ವಾಸವನ್ನು ಅರಣ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.