ಕುರ್ತಕೋಟಿ ಸಾಂಸ್ಕೃತಿಕ ಚಟುವಟಿಕೆಗಳ ತವರೂರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ನಾಡಿನ ಹಲವಾರು ಸಾಹಿತಿ ಸತ್ಪುರುಷರನ್ನು ಪ್ರೋತ್ಸಾಹಿಸಿದ ಹಿರಿಮೆ ಕುರ್ತಕೋಟಿ ಗ್ರಾಮಕ್ಕೆ ಸಲ್ಲುತ್ತದೆ ಎಂದು ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.

Advertisement

ಗದಗ ತಾಲೂಕಿನ ಕುರ್ತಕೋಟಿಯ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗಿದ ಗದಗ ತಾಲೂಕಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕುರ್ತಕೋಟಿಯು ನಾಟಕ, ಬಯಲಾಟ, ರಂಗಭೂಮಿ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಭಾರತ ರತ್ನ ಭೀಮಸೇನ ಜೋಶಿ ಅವರ ಪ್ರಥಮ ಗುರುಗಳೂ ಕುರ್ತಕೋಟಿಯವರು. ಈ ಗ್ರಾಮವು ಐತಿಹಾಸಿಕ ಶಿಲ್ಪಕಲೆ, ವಾಸ್ತುಶಿಲ್ಪದಂತಹ ಕಟ್ಟಡಗಳಿಂದ ಖ್ಯಾತವಾಗಿದೆ. ಕುರ್ತಕೋಟಿ ಗ್ರಾಮದ ಕನ್ನಡದ ಕೀರ್ತಿ ಎಂದೇ ಪ್ರಖ್ಯಾತರಾದ ಕೀರ್ತಿನಾಥ ಕುರ್ತಕೋಟಿ ಅವರು ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾಗಿದ್ದರು. ಕುಮಾರವ್ಯಾಸ ಹಾಗೂ ದ.ರಾ. ಬೇಂದ್ರೆ ಸಾಹಿತ್ಯದಲ್ಲಿ ಅಧಿಕಾರಯುತವಾಗಿ ಮಾತನಾಡಿ ಪ್ರಖ್ಯಾತ ವಾಗ್ಮಿಯೂ ಆಗಿದ್ದರು ಎಂದರು.

ಹೊಸಳ್ಳಿಯ ಸಂಸ್ಥಾನಮಠದ ಅಭಿನವ ಶ್ರೀ ಬೂದಿಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಗದಗ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ ತಾಲೂಕು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಶಿವಶರಣೆ ಡಾ. ನೀಲಮ್ಮ ತಾಯಿ, ಅನ್ನದಾನಿ ಹಿರೇಮಠ, ಎಪಿಎಂಸಿ ಸದಸ್ಯರಾದ ಅಪ್ಪಣ್ಣ ಇನಾಮತಿ, ಗಿರೀಶ ಡಬಾಲಿ, ವಿರುಪಣ್ಣ ಹೊಸಮನಿ, ಚಂದ್ರಶೇಖರಪ್ಪ ಚೂರಿ, ಶರಣೆ ರತ್ನಕ್ಕ ಪಾಟೀಲ, ಡಾ. ಶಿವಪ್ಪ ಕುರಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಆರ್.ಎಸ್. ಬುರುಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ, ಗುರಣ್ಣ ಬಳಗಾನೂರ, ಅರ್ಜುನ ಗೊಳಸಂಗಿ, ಪ್ರೊ. ಕೆ.ಎಚ್. ಬೇಲೂರ, ಸಾಹಿತಿಗಳು, ಹಿರಿಯರು, ಗಣ್ಯರು ಉಪಸ್ಥಿತರಿದ್ದರು.

ಖ್ಯಾತ ಸಾಹಿತಿ ಜಗನ್ನಾಥ ಜಮಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗದಗ ಜಿಲ್ಲೆಯು ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ಚಿತ್ರಕಲೆ, ಶಿಲ್ಪಕಲೆ, ರಂಗಭೂಮಿ, ಜಾನಪದ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆಯನ್ನು ನೀಡಿದ್ದು, ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪರಂಪರೆಯ ಪ್ರವಾಹವೇ ಹರಿದು ಬಂದಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ಸರ್ವರನ್ನು ಸ್ವಾಗತಿಸಿದರು. ಕರಿಯಪ್ಪ ಕೊಡವಳ್ಳಿ, ಶಹನಾಜ್ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎ. ಇನಾಮತಿ ಪ್ರೌಢಶಾಲೆಯು ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಮಂಜುಳಾ ವೆಂಕಟೇಶಯ್ಯ ವಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಗದಗ ಜಿಲ್ಲೆಯನ್ನು ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ ಎಂದರೆ ತಪ್ಪಾಗಲಾರದು. ಜಿಲ್ಲೆಯಲ್ಲಿನ ಗ್ರಾಮಗಳು ಸಾಹಿತ್ಯ, ನಾಟಕ, ಕಲೆ ಕ್ಷೇತ್ರಗಳಲ್ಲಿ ಉತ್ತಮ ಪರಿಸರವನ್ನು ಹೊಂದಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ ಮಾತನಾಡಿ, ಕನ್ನಡ ಬದ್ಧತೆ ಹಾಗೂ ಪರಿಪೂರ್ಣತೆ ಹೊಂದಿದ ಭಾಷೆಯಾಗಿದೆ. ಕನ್ನಡ ಭಾಷೆಯನ್ನು ಲಿಪಿಗಳ ರಾಣಿ ಎಂದು ಹೆಸರಿಸಲಾಗಿದೆ. ಕನ್ನಡ ನಾಡು ಹೆಸರಾಂತ ಕವಿಗಳು, ನಾಟಕಕಾರರು, ಸಾಹಿತಿಗಳು, ಗಮಕಿಗಳನ್ನು ಹೊಂದಿದೆ. ಕುರ್ತಕೋಟಿ ಗ್ರಾಮವು ಸ್ನೇಹ-ಸೌಹಾರ್ದತೆಗೆ, ಸಹನೆ-ತಾಳ್ಮೆಗೆ ಹೆಸರಾಗಿದೆ. ಕನ್ನಡದ ದೀಪ ಚಿರಕಾಲ ಬೆಳಗಲಿ ಎಂದು ಹಾರೈಸಿದರು.

“ಕುರ್ತಕೋಟಿ ಗ್ರಾಮವು ಸಾಹಿತ್ಯ, ಸಂಸ್ಕೃತಿ, ಸಂಗೀತ, ರಾಜಕೀಯ, ಕಲಾಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕುರ್ತಕೋಟಿಯ ಡಾ. ಅರುಣ ಪಾಟೀಲ ಅವರು ಶ್ರೇಷ್ಠ ಸಂಶೋಧಕರು, ವಿಜ್ಞಾನಿಗಳಾಗಿದ್ದಾರೆ. ರಸಾಯನ ಶಾಸ್ತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದಿದ್ದು, ಜಿಲ್ಲೆಯಲ್ಲಿ ಮೋಡ ಬಿತ್ತನೆ ಪ್ರಯೋಗಕ್ಕೆ ಕಾರಣೀಭೂತರಾಗಿದ್ದಾರೆ. ಕನ್ನಡ ನಾಡಿನ ಸೇವೆಗಾಗಿ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಲು ಗದಗ ಜಿಲ್ಲೆಯ ಪಾತ್ರ ಮಹತ್ವದ್ದಾಗಿದೆ. ಈ ಕನ್ನಡ ಸಾಹಿತ್ಯ ಸಮ್ಮೇಳನವು ಮಾದರಿ ಸಮ್ಮೇಳನವಾಗಲಿ”

– ಡಾ. ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here