ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ರಸಋಷಿ ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಮತ್ತು ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನಿತ್ತು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮತ್ತು ಆ ಮೂಲಕ ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಅಜರಾಮರ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಯರಗುಪ್ಪಿ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ 120ನೇ ಜನ್ಮದಿನದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಜಾತಿ, ಮತ, ಜನಾಂಗ, ವರ್ಣ ಇತ್ಯಾದಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಪ್ರಪಂಚದ ಮಕ್ಕಳೆಲ್ಲ `ಅನಿಕೇತನ’ರಾಗಬೇಕು ಎಂದು ಕುವೆಂಪು ಅವರು ಹೇಳಿದ್ದು ಅಕ್ಷರಶಃ ಸತ್ಯವಾದ ಮಾತು ಎಂದರು.
ದಕ್ಷಿಣ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಸತೀಶ ಬೋಮಲೆ ಮಾತನಾಡಿ, ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಶಾಲಾ ಅವಧಿಯ ಪ್ರಾರ್ಥನಾ ಸಮಯದಲ್ಲಿ ಹಾಡಿ ಅವರನ್ನು ಪ್ರತಿದಿನ ಸ್ಮರಿಸಲಾಗುತ್ತದೆ. ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಕುವೆಂಪು ಅವರ ಕವಿತೆಗಳು ಎತ್ತಿ ತೋರಿಸುತ್ತವೆ. ಅವರ ಜನ್ಮ ದಿನಾಚರಣೆಯನ್ನು ರಾಜ್ಯ ಸರ್ಕಾರವು 2015ರಿಂದ ವಿಶ್ವ ಮಾನವ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದು ಹೇಳಿದರು.
ಮುಖ್ಯೋಪಾಧ್ಯಯ ಬಿ.ಎಂ. ಕುಂಬಾರ ಕುವೆಂಪುರವರ ಕುರಿತು ಮಾತನಾಡಿದರು. ಶಿಕ್ಷಕರಾದ ಎಚ್.ಡಿ. ನಿಂಗರಡ್ಡಿ, ಆರ್.ಎಮ್. ಶಿರಹಟ್ಟಿ, ಆರ್.ಕೆ. ಉಪನಾಳ, ಅಕ್ಷತಾ ಕಾಟೆಗಾರ, ಎನ್‌ಟಿಸಿ ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.