ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಹರಪನಹಳ್ಳಿ ನಗರದ ತಾಲೂಕು ಆಡಳಿತ ಕಚೇರಿಯ ಮುಂಭಾಗದಲ್ಲಿ ತಾಲೂಕಿನ ಕಣಿವಿಹಳ್ಳಿ ಸಮೀಪದ ಜಾಜಿಕಲ್ ಗುಡ್ಡದಲ್ಲಿ ಸುಜಲಾನ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರು ಕಾವಲುಗಾರರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿರುವ ಕಂಪನಿಯ ಹಿರಿಯ ಅಧಿಕಾರಿಗಳ ನಡೆಯನ್ನು ಖಂಡಿಸಿ ಶನಿವಾರ ಎಐಸಿಸಿಟಿಯು ವತಿಯಿಂದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಸಂದೇರ ಪರಶುರಾಮ, ಹಗಲು-ರಾತ್ರಿ ಎನ್ನದೆ ಸೆಕ್ಯುರಿಟಿ ಗಾರ್ಡ್ ಗಳು ಕಳೆದ 22 ವರ್ಷಗಳಿಂದ ಕಂಪನಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ. ಅವರಿಗೆ ಸರಿಯಾಗಿ ಮೂಲ ವೇತನ ನೀಡದೆ ಕಿರುಕುಳ ನೀಡುತ್ತಿದ್ದು, ಕಾರ್ಮಿಕ ಕಾನೂನು ಉಲ್ಲಂಘನೆ ಮಾಡುತ್ತಿರುವ ಕಂಪನಿಯ ನಡೆ ಖಂಡನೀಯ ಎಂದರು.
ಯಾವುದೋ ಒತ್ತಡಗಳಿಂದ ಸೆಕ್ಯುರಿಟಿ ಗಾರ್ಡ್ಗಳನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲು ನೋಟೀಸ್ ಜಾರಿ ಮಾಡಿದ್ದಾರೆ. ಇವರನ್ನೇ ನಂಬಿಕೊಂಡ ಕುಟುಂಬ ವರ್ಗದವರಿಗೆ ಕಂಪನಿಯು ಅನ್ಯಾಯ ಮಾಡುತ್ತಿದೆ. ಕಂಪನಿಯು ಕಾರ್ಮಿಕ ಕಾನೂನು ರಕ್ಷಣೆ ಮಾಡಬೇಕು ಎಂದರು.
ಮುಖಂಡರಾದ ಗುಳೇದಹಟ್ಟಿ ಸಂತೋಷ, ಹುಲಿಕಟ್ಟಿ ಮೈಲಪ್ಪ, ದ್ವಾರಕೇಶ್, ಸೆಕ್ಯುರಿಟಿ ಗಾರ್ಡ್ ಗಳಾದ ಬಸವರಾಜ, ಮೇಘರಾಜ, ಕೆ. ಪರಮೇಶ್ ನಾಯ್ಕ, ಪ್ರಕಾಶ್ ನಾಯ್ಕ ಇತರರಿದ್ದರು.