ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ದಸರಾ ಕ್ರೀಡಾಕೂಟಗಳು ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಿ, ಕ್ರೀಡಾಪಟುಗಳನ್ನು ಗುರುತಿಸಿ ಆ ಮೂಲಕ ಅವರಿಗೆ ರಾಜ್ಯ, ರಾಷ್ಟ್ರ ಮಟ್ಟದ ವೇದಿಕೆ ಸೃಷ್ಟಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಮೀಣ ಕ್ರೀಡಾಪಟುಗಳು ಭಾಗವಹಿಸಬೇಕು. ಆದರೆ ಕ್ರೀಡಾ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪ್ರಚಾರ ಮತ್ತು ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಬೇಸರ ವ್ಯಕ್ತಪಡಿಸಿದರು.
ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಪಟ್ಟಣದ ಉಮಾ ವಿದ್ಯಾಲಯ ಮೈದಾನದಲ್ಲಿ 2025-26ನೇ ಸಾಲಿನ ಲಕ್ಷ್ಮೇಶ್ವರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೂರ್ವ ಸಿದ್ಧತೆಯಿಲ್ಲದೇ ಗೊಂದಲದ ಗೂಡಾದ ದಸರಾ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮ ಕೇವಲ 10 ನಿಮಿಷದಲ್ಲಿ ಮುಕ್ತಾಯವಾಯಿತು. ಉದ್ಘಾಟನೆಯ ಸಂದರ್ಭದಲ್ಲಿ ಬೆರಳೆಣಿಕೆಯಷ್ಟೇ ಕ್ರೀಡಾಪಟುಗಳು ಭಾಗವಹಿಸಿದ್ದರು. ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕ್ರೀಡಾಕೂಟಕ್ಕೆ ಕೊಂಚ ಮೆರುಗು ಬಂದಿತ್ತು. ಆ.16ರಂದೇ ನಡೆಯಬೇಕಿದ್ದ ಕ್ರೀಡಾಕೂಟ ಮಳೆ ಇತ್ಯಾದಿ ಕಾರಣದಿಂದ ಮುಂದೂಡಲ್ಪಟ್ಟಿತ್ತು.
ಮಾಹಿತಿ ಹಾಗೂ ಪ್ರಚಾರದ ಕೊರತೆಯಿಂದ ಗ್ರಾಮೀಣ ಭಾಗದ ಅನೇಕ ಕ್ರೀಡಾಪಟುಗಳು ಅವಕಾಶ ವಂಚಿತರಾಗಿದ್ದಾರೆ. ಕ್ರೀಡಾಕೂಟದಲ್ಲಿ ಯಾವುದೇ ಶಿಸ್ತು, ಕುಡಿಯುವ ನೀರಿನ ವ್ಯವಸ್ಥೆ, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇಲ್ಲದ ಕಾರಣ ಕ್ರೀಡಾಪಟುಗಳು ಪರಸ್ಪರ ಹೊಡೆದಾಡಿದ್ದಾರೆ. ಈ ವೇಳೆ ಶಾಲಾ ಮಕ್ಕಳಿಗೆ ಏನಾದರೂ ತೊಂದರೆಯಾಗಿದ್ದರೆ ಯಾರು ಹೊಣೆ ಎಂದು ಪಾಲಕರಾದ ಮಲ್ಲಿಕಾರ್ಜುನ ದೊಡ್ಡಮನಿ ಅವ್ಯವಸ್ಥೆಯ ವಿರುದ್ಧ ಹರಿಹಾಯ್ದರು. ಈ ವೇಳೆ ಆರ್.ಎಸ್. ನರೇಗಲ್, ಆನಂದ ಮುಳಗುಂದ ಸೇರಿ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.
ಬಟ್ಟೂರ ಮತ್ತು ಬಾಲೆಹೊಸೂರ ಗ್ರಾಮಗಳ ಕ್ರೀಡಾಪಟುಗಳು ಖೋಖೋ ಪಂದ್ಯಾವಳಿಯ ವೇಳೆ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಆಟಕ್ಕೆ ಬಳಸುವ ಸಾಮಗ್ರಿಗಳನ್ನು ಬಳಸಿ ಹೊಡೆದಾಟಕ್ಕಿಳಿದು ಗಾಯಗೊಂಡಿದ್ದು, ಸ್ಥಳದಲ್ಲಿದ್ದ ಇಬ್ಬರು ಪೊಲೀಸರಿಂದ ಪರಿಸ್ಥಿತಿ ನಿಯಂತ್ರಿಸಲಾಗದಷ್ಟು ವಿಕೋಪಕ್ಕೆ ತಿರುಗಿದೆ. ಅಲ್ಲಿದ್ದ ಶಾಲಾ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಈ ವೇಳೆ ದೌಡಾಯಿಸಿದ ಪಿಎಸ್‌ಐ ನಾಗರಾಜ ಗಡಾದ ಲಾಠಿ ರುಚಿ ತೋರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ತಾ.ಪಂ ಇಓ ಕೃಷ್ಣಪ್ಪ ಧರ್ಮರ ಮತ್ತು ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಸಿ.ವಾಯ್. ಮೇಗಲಮನಿ ಕ್ರೀಡಾಕೂಟ ಸ್ಥಗಿತಗೊಳಿಸಿ ಮುಂದೂಡಿದರು.