ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತಾಲೂಕಿನ ನೀಲಗುಂದ ಗ್ರಾಮದ ಕೆರೆ ಭರ್ತಿಯಾಗಿರುವ ಪರಿಣಾಮ ಕೆರೆಯ ನೀರು ತಾಳೇದಹಳ್ಳಿ ರೈತರ ಜಮೀನುಗಳಿಗೆ ನುಗ್ಗಿದ್ದು, 70 ಎಕರೆಗೂ ಅಧಿಕ ಬೆಳೆ ಜಲಾವೃತವಾಗಿದೆ.
ಕೆರೆ ಭರ್ತಿಯಾದಾಗ ನೀರು ರೈತರ ಜಮೀನುಗಳತ್ತ ನುಗ್ಗುತ್ತಿದೆ. ಇದರಿಂದ ಮೆಕ್ಕೆಜೋಳ, ಮೆಣಸಿನಕಾಯಿ, ಅಡಿಕೆ, ಪಪ್ಪಾಯ, ಸೇವಂತಿಗೆ, ಟೊಮಾಟೋ ಬೆಳೆಗಳೆಲ್ಲವೂ ನೀರು ಪಾಲಾಗುತ್ತಿವೆ. ಕೆರೆ ನೀರು ಜಮೀನುಗಳಿಗೆ ನುಗ್ಗದೆ ಕೋಡಿ ಮೂಲಕ ಹೊರಗಡೆ ಹೋಗಲು ವ್ಯವಸ್ಥೆ ಕಲ್ಪಿಸಲು ಕೂಡಲೇ ಸಮೀಕ್ಷೆ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಸ್ಥಳಕ್ಕೆ ಭೇಟಿ ನೀಡಿ ಸೂಚಿಸಿದರು.
ಈ ವೇಳೆ ತಹಸೀಲ್ದಾರ್ ಬಿ.ವಿ. ಗಿರೀಶ್ ಬಾಬು, ಸಿಪಿಐ ಮಹಂತೇಶ್ ಸಜ್ಜನ್, ಪಿಎಸ್‌ಐ ಶಂಭುಲಿಂಗ ಎಸ್.ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕೆ. ಕುಬೇರಪ್ಪ, ನೀಲಗುಂದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹನುಮಂತಪ್ಪ ಸೇರಿದಂತೆ ಇತರರಿದ್ದರು.