ಬೆಂಗಳೂರು: ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೆಸರಿನಲ್ಲಿ ಸೈಬರ್ ವಂಚಕರು ಬೆಂಗಳೂರಿನ 45 ವರ್ಷದ ವ್ಯಕ್ತಿಗೆ 42 ಲಕ್ಷಕ್ಕೂ ಹೆಚ್ಚು ಹಣ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಹೆಚ್ಚಿನ ಲಾಭ ಸಿಗಲಿದೆ ಎಂಬ ಆಮಿಷಕ್ಕೆ ಬಲಿಯಾದ ವ್ಯಕ್ತಿಯು, ಈಗ ಪೊಲೀಸರ ಮೊರೆ ಹೋಗಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಅಶುತೋಷ್ ಶರ್ಮಾ ಎನ್ನುವ ವ್ಯಕ್ತಿ ಕ್ರಿಪ್ಟೋ ಹೂಡಿಕೆ ಕುರಿತು ಮಾರ್ಗದರ್ಶನ ನೀಡುತ್ತೇನೆ ಎಂದು ಸಂಪರ್ಕಿಸಿದ್ದ. ನಂತರ ಟೆಲಿಗ್ರಾಂ ಗುಂಪಿಗೆ ಸೇರಿಸಿ, ಹೂಡಿಕೆಗೆ ಶೇ.15ರಷ್ಟು ಲಾಭ ಸಿಗುತ್ತದೆ ಎಂದು ಖಚಿತಪಡಿಸಿದ್ದ. ಪ್ರಾರಂಭದಲ್ಲಿ ಮಾಡಿದ ಸ್ವಲ್ಪ ಹೂಡಿಕೆಗೆ ಲಾಭ ತೋರಿಸಿದ್ದರಿಂದ ಸಂತ್ರಸ್ತರಿಗೆ ನಂಬಿಕೆ ಬಂದು, ಇನ್ನಷ್ಟು ಹಣ ಹೂಡಿಕೆ ಮಾಡಲಾಗಿತ್ತು.
ಟ್ರೇಡಿಂಗ್ ಖಾತೆಯಲ್ಲಿ 138,687.22 USDT ಬ್ಯಾಲೆನ್ಸ್ ತೋರಿದ್ದರೂ, ಹಣ ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ “ಬ್ಯಾಂಕ್ ವಿವರಗಳು ತಪ್ಪಾಗಿದೆ” ಎಂದು ಹೇಳಿ, ಅದನ್ನು ಸರಿಪಡಿಸಲು ₹4 ಲಕ್ಷ ಪಾವತಿಸಬೇಕು ಎಂದು ವಂಚಕರು ಮಾಹಿತಿ ನೀಡಿದ್ದಾರೆ. ನಂತರ “ತಡ ಪಾವತಿ ದಂಡ”, “ಕರೆನ್ಸಿ ಪರಿವರ್ತನೆ ಶುಲ್ಕ”, “RBI ತೆರಿಗೆ” ಎಂಬ ಹೆಸರಿನಲ್ಲಿ ಮತ್ತಷ್ಟು ಹಣ ಬೇಡಿಕೆ ಇಟ್ಟಿದ್ದಾರೆ.
ಲಾಭ ಪಡೆಯುವ ಆಸೆಯಿಂದ ಸಂತ್ರಸ್ತರು ಸ್ನೇಹಿತರಿಂದ ಹಾಗೂ ಡಿಜಿಟಲ್ ಸಾಲ ಆಪ್‌ಗಳಿಂದ ಹಣ ಪಡೆಯುತ್ತಾ ಜುಲೈ 3ರಿಂದ ಆಗಸ್ಟ್ 1ರವರೆಗೆ ಒಟ್ಟು ₹42.62 ಲಕ್ಷ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದರೂ, ಯಾವುದೇ ಲಾಭ ವಾಪಸ್ ಸಿಗಲಿಲ್ಲ. ಕೊನೆಗೆ ವಂಚನೆ ನಡೆದಿರುವುದು ಅರಿವಾಗಿ ಆತ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರು ಇದೀಗ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


