ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ಕಾಲಕ್ಕೆ ಸೇರಿದ ವಸ್ತುಗಳು ಪತ್ತೆಯಾಗಿವೆ. ಈ ಪತ್ತೆಯಿಂದ ಗ್ರಾಮದಲ್ಲಿ ಹಾಗೂ ಇತಿಹಾಸಾಸಕ್ತರಲ್ಲಿ ಭಾರೀ ಕುತೂಹಲ ಮೂಡಿದೆ. ಲಕ್ಕುಂಡಿ ಗ್ರಾಮದ ಬಸಪ್ಪ ಬಡಿಗೇರ ಅವರಿಗೆ ಶೋಧ ಕಾರ್ಯದ ವೇಳೆ ಹಲವು ಪುರಾತನ ವಸ್ತುಗಳು ಸಿಕ್ಕಿವೆ. ನಿಧಿ ಸಿಕ್ಕ ಬೆನ್ನಲ್ಲೇ ಈ ಪುರಾತನ ವಸ್ತುಗಳು ಪತ್ತೆಯಾಗಿದ್ದು, ಇವುಗಳು ಐತಿಹಾಸಿಕ ಮಹತ್ವ ಹೊಂದಿರಬಹುದೆಂದು ಅಂದಾಜಿಸಲಾಗಿದೆ.
ಪತ್ತೆಯಾದ ವಸ್ತುಗಳಲ್ಲಿ ಮುತ್ತು, ಹವಳ, ಬಿಳಿ ಹವಳ, ನೀಲಮಣಿ, ಸ್ಪಟಿಕ, ಕರಿಪುಕ್ಕಾ ಸೇರಿದಂತೆ ಹಲವು ಪುರಾತನ ಕಾಲದ ವಸ್ತುಗಳು ಸೇರಿವೆ. ಇವುಗಳು ಪ್ರಾಚೀನ ಕಾಲದ ಆಭರಣಗಳು ಅಥವಾ ವಾಣಿಜ್ಯ ವಸ್ತುಗಳಾಗಿರಬಹುದೆಂದು ಊಹಿಸಲಾಗಿದೆ. ಬಸಪ್ಪ ಬಡಿಗೇರ ಅವರು ಹಲವು ವರ್ಷಗಳಿಂದ ಲಕ್ಕುಂಡಿ ಗ್ರಾಮದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಳೆ ಬಂದ ನಂತರ ಗ್ರಾಮದಲ್ಲಿ ಶೋಧ ಕಾರ್ಯ ನಡೆಸುವುದು ಅವರ ರೂಢಿ. ಈ ಹಿಂದೆ ಕೂಡ ಅವರಿಗೆ ಸಾಕಷ್ಟು ಪುರಾತನ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಪುರಾತನ ನಿಧಿ ಅಡಗಿದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಪತ್ತೆಗಳು ಲಕ್ಕುಂಡಿಯ ಪುರಾತನ ವೈಭವದ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿವೆ.



