ಗದಗ: ಐತಿಹಾಸಿಕ ಖ್ಯಾತಿಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಮುಚ್ಚುವ ವೇಳೆ 455 ಗ್ರಾಂ ಚಿನ್ನ ಪತ್ತೆಯಾದ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ 2022ರಲ್ಲಿ ನಡೆದಿದ್ದ ನಿಧಿ ವಂಚನೆ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ.
ಧಾರವಾಡ ಮೂಲದ ಬಸೀರಾಬೇಗಂ ಅವರು 2022ರಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರಿನಲ್ಲಿ “ನಿಧಿ ಸಿಕ್ಕಿದೆ” ಎಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ ಪ್ರಕರಣ ಪ್ರಗತಿ ಕಾಣದೆ ಉಳಿದಿತ್ತು.
ಇದೀಗ 2026ರ ಫೆಬ್ರವರಿ 11ರಂದು ಸಮಾಜಸೇವಕ ಪೀರಸಾಬ್ ಕೌತಾಳ “ಸರ್ಕಾರಿಗೆ ಸೇರಬೇಕಾದ ನಿಧಿ ಕೆಲವರ ಪಾಲಾಗಿದೆ” ಎಂದು ಮರು ದೂರು ನೀಡಿದರು. ಹಂಡೆಯಲ್ಲಿ ಚಿನ್ನದ ನಾಣ್ಯಗಳಿರುವ ವಿಡಿಯೋ ದೃಶ್ಯಾವಳಿಯನ್ನೂ ಸಲ್ಲಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ರೋಹನ್ ಜಗದೀಶ್ ಮರು ತನಿಖೆಗೆ ಆದೇಶಿಸಿದರು.
ತನಿಖೆಯಲ್ಲಿ ಉತ್ತರಾಖಂಡ ಮೂಲದ ಹಜರತ್ ಮಾಲ್ವಿ ಬಂಧನವಾಗಿದ್ದು, 2022ರಲ್ಲಿ ಗದಗ ನಗರದಲ್ಲಿ ಹಂಡೆ ಖರೀದಿಸಿ ಅದರಲ್ಲಿ ಗೋಲ್ಡ್ ಬಣ್ಣದ ನಕಲಿ ಬಿಸ್ಕೆಟ್‌ಗಳನ್ನು ಇಟ್ಟು “ಐತಿಹಾಸಿಕ ನಿಧಿ ಪತ್ತೆ” ನಾಟಕವಾಡಿರುವುದು ಬಯಲಾಗಿದೆ. ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪರ ಜಮೀನಿನಲ್ಲಿ ನಿಧಿ ಶೋಧ ಮಾಡುವ ನೆಪದಲ್ಲಿ ಪರಿಚಯ ಬೆಳೆಸಿ, ವಿಧಿವಿಧಾನ ಮತ್ತು ಪ್ರಯಾಣ ಖರ್ಚು ಹೆಸರಿನಲ್ಲಿ ಸುಮಾರು 20 ಲಕ್ಷ ರೂ. ಸುಲಿಗೆ ಮಾಡಿದ್ದಾನೆ.
ಪೂರ್ವಯೋಜನೆಯಂತೆ ಹಂಡೆ ಹೂತು ನಂತರ ಪತ್ತೆ ಮಾಡಿದಂತೆ ತೋರಿಸಿ, ಹಣದ ವಿಚಾರದಲ್ಲಿ ಗಲಾಟೆ ಉಂಟಾದಾಗ “ಚಿನ್ನ ಮಣ್ಣಾಗಿದೆ” ಎಂದು ಹೇಳಿ ಪರಾರಿಯಾಗಿದ್ದಾನೆ. ಪ್ರಾಥಮಿಕ ತನಿಖೆ ಪ್ರಕಾರ ದೆಹಲಿ ಹಾಗೂ ಧಾರವಾಡ ಮೂಲದ ಮಹಿಳೆಯರು ಸೇರಿದಂತೆ 8ಕ್ಕೂ ಹೆಚ್ಚು ಮಂದಿ ಮೋಸಕ್ಕೆ ಬಲಿಯಾಗಿದ್ದಾರೆ. ಹಣ ವರ್ಗಾವಣೆ, ವಿಡಿಯೋ ಚಿತ್ರೀಕರಣ ಹಾಗೂ ಸಹಾಯಕರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.
ಎಸ್ಪಿ ರೋಹನ್ ಜಗದೀಶ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, “ನಿಧಿ ಪತ್ತೆ, ಗುಪ್ತ ಸಂಪತ್ತು” ಹೆಸರಿನಲ್ಲಿ ಸಂಪರ್ಕಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.



