ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಳಸಾಪುರ ರಸ್ತೆಯ ನಿವಾಸಿ ಲಕ್ಷ್ಮಮ್ಮ ಆರ್. ಪಾಟೀಲ (95) ಅವರು ಮಂಗಳವಾರ ರಾತ್ರಿ ನಿಧನರಾದರು. ಮೃತರು ಗದುಗಿನ ಹಿರಿಯ ಇಂಜಿನಿಯರ್ ಎಂ.ಆರ್. ಪಾಟೀಲ ಸೇರಿದಂತೆ ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.
ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮೃತರ ನೇತ್ರದಾನ ನೀಡುವಂತೆ ಪ್ರೇರಣೆ ನೀಡಿದರು. ಕುಟುಂಬದವರ ಒಪ್ಪಿಗೆಯಂತೆ ಹುಬ್ಬಳ್ಳಿಯ ಕಣ್ಣಿನ ಆಸ್ಪತ್ರೆಯ ತಜ್ಞರ ತಂಡ ನೇತ್ರದಾನದ ಪ್ರಕ್ರಿಯೆ ಕೈಗೊಂಡಿತು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ಝೋನ್ ಚೇರ್ಪರ್ಸನ್ ರಮೇಶ ಶಿಗ್ಲಿ, ಲಯನ್ ಲೇಡಿಸ್ ವಿಂಗ್ ಅಧ್ಯಕ್ಷೆ ಪೂಜಾ ಪಾಟೀಲ ಮುಂತಾದವರಿದ್ದರು.
ಸಾರ್ವಜನಿಕರು ತಮ್ಮ ಮರಣದ ಬಳಿಕ ನೇತ್ರದಾನ ಮಾಡಲು ಮೊದಲೇ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಕುಟುಂಬಕ್ಕೆ ತಿಳಿಸಿರಬೇಕು. ನೋಂದಣಿ ಮಾಡದಿದ್ದರೂ ವ್ಯಕ್ತಿಯ ಸಾವಿನ ಬಳಿಕ ಕುಟುಂಬದ ಒಪ್ಪಿಗೆ ಮೇರೆಗೆ ನೇತ್ರದಾನದ ಪ್ರಕ್ರಿಯೆ ನಡೆಸಬಹುದು. ಮರಣದ ನಂತರ ಮಣ್ಣಲ್ಲಿ ಮಣ್ಣಾಗುವ/ ಬೆಂಕಿಯಲ್ಲಿ ಭಸ್ಮವಾಗುವ ನೇತ್ರಗಳನ್ನು ಮರಣದ ತಕ್ಷಣ ದಾನ ಮಾಡಿದರೆ ಕಣ್ಣಿಲ್ಲದವರು ಜಗತ್ತನ್ನು ನೋಡಬಹುದು. ಈ ಪುಣ್ಯದ ಕಾರ್ಯಕ್ಕೆ ಕುಟುಂಬದವರು ಸಹಕರಿಸಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜಣ್ಣ ವೇರ್ಣೆಕರ ಮನವಿ ಮಾಡಿದ್ದಾರೆ.



