ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪೊಲೀಸ್ ಠಾಣೆಗೆ 2017ರ ಫೆಬ್ರವರಿ 5ರಂದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 23 ಜನ ಅಪರಾಧಿಗಳಿಗೆ ಸೋಮವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.
8 ವರ್ಷಗಳ ನಂತರ ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಗಿದ್ದು, ಎಲ್ಲ ಅಪರಾಧಿಗಳಿಗೆ 5 ವರ್ಷಗಳ ಸಜೆಯನ್ನು ವಿಧಿಸಲಾಗಿದೆ. ಸಾರ್ವಜನಿಕ ಸ್ವತ್ತುಗಳನ್ನು ಹಾಳು ಮಾಡಿರುವ ಆರೋಪದಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಮತ್ತು ಪರಿಹಾರವನ್ನು ಪ್ರಕಟಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಗೆ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಸೋಮವಾರ ಸಂಜೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಪ್ರಕರಣದ ಪ್ರಮುಖ ಆರೋಪಿಗಳಾದ ರವಿ ಹತ್ತಾಳ, ರಾಜು ಉಡಚಪ್ಪ ಹೊಳಲಾಪೂರ ಇವರಿಗೆ 5 ವರ್ಷ ಜೈಲು ಶಿಕ್ಷೆ ಜೊತೆಗೆ 5 ಲಕ್ಷ ರೂ ದಂಡ ವಿಧಿಸಿ ಆದೇಶಿದ್ದಾರೆ.
ಇತರ ಆರೋಪಿಗಳಾದ ಮಹಾಂತೇಶ ಉಡಚಪ್ಪ ಹೊಳಲಾಪುರ, ಪರಮೇಶ ಹತ್ತಾಳ, ಮಂಜಪ್ಪ ಮೇಟಿ, ಮಹಾಂತೇಶ ಶಿಂಧೆ, ಸುರೇಶ ಸ್ವಾಧಿ, ಬಸವರಾಜ ಉಡಚಪ್ಪ ಹೊಳಲಾಪೂರ, ಶರಣಪ್ಪ ಚೋಟಗಲ್, ಜೈಲಾನಿ ತಾಂಬೂಲಿ, ಶಿವಪ್ಪ ಕುರಿ ಸೇರಿದಂತೆ 9 ಜನರಿಗೆ 5 ವರ್ಷ ಜೈಲು ಮತ್ತು 1 ಲಕ್ಷ ರೂಗಳ ದಂಡ, ಉಳಿದಂತೆ ಮಲ್ಲಪ್ಪ ಹತ್ತಾಳ, ಬಸವರಾಜ್ ಕೊರವನ್ನವರ್, ಬೀರಪ್ಪ ಬಳ್ಳಾರಿ, ಪರಸಪ್ಪ ಮೇಟಿ, ಮಂಜಯ್ಯ ಬಾಳಿಹಳ್ಳಿಮಠ, ಮಂಜಪ್ಪ ಇಮ್ಮಡಿ, ಶಂಭುಲಿಂಗಯ್ಯ ಬರಗುಂಡಿಮಠ, ಇರ್ಫಾನ್ ತಹಸೀಲ್ದಾರ, ಮೈನುದ್ದೀನ ತಹಸೀಲ್ದಾರ, ಬಸವರಾಜ ಹರಿಜನ, ರಾಜೂ ಹರಿಜನ, ಚಂದ್ರಶೇಖರ ಸಾಧು ಇವರಿಗೆ ಐದು ವರ್ಷ ಜೈಲು ಮತ್ತು 5 ಸಾವಿರ, ಕೆಲವರಿಗೆ 1 ಸಾವಿರ ರೂ ದಂಡ ವಿಧಿಸಿದ್ದಾರೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಘಟನೆಯಲ್ಲಿ ಸಂಭವಿಸಿದ ಹಾನಿಯ ಬಾಬ್ತನ್ನು ಭರಿಸಲು, ವಿಧಿಸಲಾದ ದಂಡದಲ್ಲಿ 12.72 ಲಕ್ಷ ರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಹಾಗೂ ಪಿರ್ಯಾದಿದಾರ ಪೊಲೀಸ್ ಸಿಬ್ಬಂದಿಗಳಾಗಿರುವ ಕೆ.ಎನ್. ಮುಡಿಯಮ್ಮನವರ ಮತ್ತು ಎಫ್.ಬಿ. ತುರನೂರ ಇವರಿಗೆ 35 ಸಾವಿರ ರೂ ಪರಿಹಾರ, ಸಿ.ಆರ್. ಸವಣೂರ ಅವರಿಗೆ 10 ಸಾವಿರ ರೂಗಳ ಪರಿಹಾರ ಹಣವನ್ನು ನ್ಯಾಯಾಯಕ್ಕೆ ಭರಣ ಮಾಡಬೇಕಂದು ತೀರ್ಪಿನಲ್ಲಿ ಆದೇಶಿಸಿದೆ. ಈ ಪ್ರಮಾಣದಲ್ಲಿ ದಂಡವನ್ನು ನೀಡಿ ಆದೇಶ ಹೊರಡಿಸಿರುವುದು ಇಡೀ ರಾಜ್ಯದಲ್ಲಿಯೇ ಪ್ರಥಮ ಪ್ರಕಣವಾಗಿದ್ದು, ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂಬ ಸಂದೇಶವನ್ನು ಸಾರಿದಂತಾಗಿದೆ.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ 112 ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಈ 112 ಜನರಲ್ಲಿ 8 ಜನರು ಮೃತಪಟ್ಟಿದ್ದು, ಓರ್ವ ಬಾಲಾಪರಾಧಿ ಇದ್ದಾನೆ. ಉಳಿದ 103 ಜನರ ಮೇಲೆ ತನಿಖೆ ನಡೆಸಲಾಗಿದ್ದು, ಅದರಲ್ಲಿ 23 ಜನರಿಗೆ ಮಾತ್ರ ಶಿಕ್ಷೆಯನ್ನು ವಿಧಿಸಿ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಸೋಮವಾರ ಆದೇಶ ಹೊರಡಿಸಿದ್ದಾರೆ.