ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿಯಲ್ಲಿ ಶನಿವಾರ ಲಕ್ಷ್ಮೇಶ್ವರ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಿಗ್ಗೆ ತಾಯಿ ಭುವನೇಶ್ವರಿ ಅವರ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.
ಗ್ರಾಮದ ಹಿರಿಯರಾದ ಮೃತ್ಯುಂಜಯ ಶಿದ್ರಾಮಯ್ಯ ಹಿರೇಮಠ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಮೆರವಣಿಗೆಗೆ ಚಾಲನೆ ನೀಡಿದರು.
ಅಲಂಕೃತ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷರಾದ ಲಲಿತ ಸಿ. ಕೆರಿಮನಿ ಅವರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ವಾದ್ಯಮೇಳದೊಂದಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪ್ರಾರಂಭಗೊಂಡ ಮೆರವಣಿಗೆ ಬಸ್ ನಿಲ್ದಾಣ, ಪೇಟೆ ಆವರಣ, ಗುಡ್ಡಳ್ಳಿ ಓಣಿ, ಗೋಣಿಸ್ವಾಮಿ ಓಣಿ, ವಾಲ್ಮೀಕಿ ಓಣಿ, ಅಂಬೇಡ್ಕರ್ ನಗರ, ಉಡಚಮ್ಮ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ, ಕನ್ನಡ ಗಂಡು ಮಕ್ಕಳ ಶಾಲೆ ಮೂಲಕ ಕೋಟೆ ಆವರಣದಲ್ಲಿನ ಗುಂಡೇಶ್ವರ ಮಹಾವೇದಿಕೆ ತಲುಪಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ಈಶ್ವರ ಮೆಡ್ಲೇರಿ, ತಾ.ಪಂ. ಇಒ ಧರ್ಮರಾಜ ಕೃಷ್ಣಪ್ಪ, ಬಿಇಒ ನಾಣಕಿ ನಾಯ್ಕ, ವಿರೂಪಾಕ್ಷಪ್ಪ ಮೇಟಿ, ಡಾ. ಎಸ್.ಕೆ. ಪಾಟೀಲ, ಅಶೋಕಗೌಡ ಪಾಟೀಲ, ಶಿವಣ್ಣ ಗಾಣಗೇರ, ಬಾಪುಗೌಡ ಭರಮಗೌಡ್ರ, ಫಕ್ಕೀರಗೌಡ ಪಾಟೀಲ, ವಸಂತ ಬಾಗೇವಾಡಿ, ಮುತ್ತಣ್ಣ ನವಲಗುಂದ, ಶಿವಯೋಗಿ ಹೊಸಕೇರಿ, ಗೀತಾ ಸುರೇಶ್ ಬೀರಣ್ಣವರ, ಮೈನು ಗಮ್ಮಣ್ಣವರ, ಗಿರೀಶ ಸಜ್ಜನ, ಬಿ.ಕೆ. ಗಡೆಪ್ಪನವರ, ಅಶೋಕ ಬಿಸೆರೊಟ್ಟಿ, ಹೆಚ್.ಎಸ್. ರಾಮನಗೌಡ್ರ, ಮಂಜುನಾಥ ಕರೆಗೌಡ್ರ, ಸತೀಶ ಪತ್ತಾರ, ಜಿ.ಎಫ್. ಡೊಂಬರ, ಶಂಕರ ಮಿಸ್ಕಿನ್, ಡಿ.ಎನ್. ಶಿರುಂಜ, ಯಳವತ್ತಿಯ ಅರವಿಂದೋ ವಿದ್ಯಾಮಂದಿರ ಶಾಲೆ, ಜನನಿ ಶಾಲೆ, ಸರ್ಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆ, ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ, ಜಗದ್ಗುರು ಪಕ್ಕೀರ ಚನ್ನವೀರೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಕದಳಿ ವೇದಿಕೆ, ಅಕ್ಕನ ಬಳಗದ ಸದಸ್ಯರು, ಗ್ರಾಮದ ಹಿರಿಯರು ಮತ್ತು ಯುವಕರು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಗ್ರಾಮದ ಎಲ್ಲ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಕನ್ನಡದ ಸಾಹಿತಿಗಳು, ಕವಿಗಳು, ವಚನಕಾರರು, ದಾಸಶ್ರೇಷ್ಠರು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಮೆರವಣಿಗೆಯ ರಂಗು ಹೆಚ್ಚಿಸಿದರು. ಪೂರ್ಣಕುಂಭ, ಡೊಳ್ಳು, ಜಾಂಜ್ ಹಾಗೂ ವಾದ್ಯಮೇಳದೊಂದಿಗೆ ಕನ್ನಡ ಸಾಹಿತ್ಯಾಭಿಮಾನಿಗಳು ಹೆಜ್ಜೆ ಹಾಕಿದರು.
ಮೆರವಣಿಗೆ ಮಾರ್ಗದಲ್ಲಿ ರಂಗೋಲಿ ಹಾಕಿ ಬ್ಯಾನರ್ಗಳು ಹಾಗೂ ತಳಿರು-ತೋರಣಗಳನ್ನು ಕಟ್ಟಿ ಸ್ವಾಗತಿಸಲಾಗಿತ್ತು. ಲಕ್ಷ್ಮೇಶ್ವರ ಸ್ಕೂಲ್ ಚಂದನ ಬ್ಯಾಂಡ್ ವಿದ್ಯಾರ್ಥಿಗಳು ಮೆರವಣಿಗೆಗೆ ಕಳೆ ತಂದಿದ್ದರು. ಮೆರವಣಿಗೆಯುದ್ದಕ್ಕೂ ಕನ್ನಡದ ಘೋಷಣೆಗಳು ಮೊಳಗಿದವು.



