ವಿಜಯಸಾಕ್ಷಿ ಸುದ್ದಿ, ಗದಗ : ಕಿತ್ತು ತಿನ್ನುವ ಬಡತನ ಹಾಗೂ ಆರ್ಥಿಕ ಸಮಸ್ಯೆಗಳ ನಡುವೆಯೇ ತನ್ನ ಕಲೆಯನ್ನು ವ್ಯಕ್ತಪಡಿಸುವ ಮೂಲಕ ಜಿಲ್ಲೆಯ ಯುವ ಪ್ರತಿಭೆ ನಾಡಿನ ಜನಮನ ಗೆದ್ದಿದ್ದಾನೆ. ಝೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ `ಕಾಮಿಡಿ ಕಿಲಾಡಿ ಪ್ರೀಮಿಯರ್ ಲೀಗ್’ನಲ್ಲಿ ಹಾಸ್ಯದ ನಟನೆ ಮೂಲಕ ಮನೆ ಮಾತಾಗುತ್ತಿರುವ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಯುವ ಉತ್ಸಾಹಿ ಕಾಮಿಡಿಯನ್ ಮಾಂತೇಶ ಕರಮಣ್ಣವರ ಭಾಗವಹಿಸಿದ್ದ ಖ್ಯಾತ ನಿರೂಪಕಿ ಅನುಶ್ರೀಯವರ ತಂಡ ಗೆಲುವು ಸಾಧಿಸಿದ್ದು, ಈ ತಂಡದಲ್ಲಿ ಮಾಂತೇಶ ಎನ್ನುವ ಪ್ರತಿಭೆ ತನ್ನ ನಟನೆಯ ಮೂಲಕ ಕಲಾರಸಿಕರ ಮನಸೆಳೆದಿದ್ದಾನೆ.
ಕಲೆ ಎನ್ನುವದು ಯಾರ ಸೊತ್ತೂ ಅಲ್ಲ. ಈ ಮಾತು ಅಕ್ಷರಶಃ ಗದಗ ಜಿಲ್ಲೆ ಲಕ್ಷ್ಮೇಶ್ವರದ ಮಾಂತೇಶ ಎಂ.ಕರಮಣ್ಣವರಗೆ ಒಪ್ಪುತ್ತದೆ. ಕುಟುಂಬದಲ್ಲಿ ಯಾರೂ ಕಲಾವಿದರು ಇಲ್ಲವಾದರೂ, ಇವರು ತಮ್ಮ ಸ್ವಂತ ಛಲದಿಂದ ಕಲೆಯನ್ನು ಕಲಿತಿದ್ದಾರೆ. ಈ ಕಲಾವಿದ ಬಾಲ್ಯದಿಂದಲೂ ಕಷ್ಟದಲ್ಲಿ ಬೆಂದು, ಈಗ ಅರಳಿದ್ದಾರೆ.

ಲಕ್ಷ್ಮೇಶ್ವರದ ಈ ಪೋರ ಮಾಂತೇಶ ಕರಮಣ್ಣವರ ತಂದೆ ಮಲ್ಲೇಶಪ್ಪ, ತಾಯಿ ಗಂಗವ್ವ. ಏಕೈಕ ಪುತ್ರನನ್ನು ಅಭಿಲಾಷೆಗೆ ತಕ್ಕಂತೆ ಬೆಳೆಸಲು ಶ್ರಮಿಸುತ್ತಿರುವ ತಂದೆ-ತಾಯಿ ಪ್ರೀತಿಯಿಂದ ಬೆಳೆಸಿದ್ದಾರೆ. ತಮ್ಮ ಮಗನೂ ದೊಡ್ಡ ಸಾಧನೆ ಮಾಡಬೇಕು ಎಂಬ ಹಿರಿದಾಸೆ ಹೊಂದಿ ಮಗನಿಗೆ ಕಲಿಯಲು ಯಾವುದೇ ಅಡ್ಡಿಪಡಿಸದೇ ಕಷ್ಟಪಟ್ಟು ಹಣ ನೀಡಿ ಕಲಿಸಿದ್ದಾರೆ.
ಈ ಬಡ ಕುಟುಂಬ ಚಿಕ್ಕದಾಗಿ ಇಡ್ಲಿ-ವಡಾ, ದೋಸೆ ಮಾರುವ ಅಂಗಡಿ ಇಟ್ಟಿಕೊಂಡಿದ್ದು, ವ್ಯಾಪಾರದಿಂದ ಬಂದಿರುವ ಲಾಭದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಮಾಂತೇಶ ವ್ಯಾಸಂಗ ಮಾಡುತ್ತಾ ತನ್ನ ತಂದೆಗೆ ಹೋಟೆಲ್‌ನಲ್ಲಿ ಸಹಾಯ ಮಾಡುತ್ತಾ ಬೆಳೆದಿದ್ದಾನೆ. ಇವನಿಗೆ ಡ್ಯಾನ್ಸ್ ಅಂದರೆ ತುಂಬಾ ಆಸಕ್ತಿ. ಶಾಲಾ-ಕಾಲೇಜು ಸೇರಿದಂತೆ ಜಿಲ್ಲೆಯ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈಗ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಕಲಾ ಪ್ರೇಕ್ಷಕರನ್ನು ಮೋಡಿ ಮಾಡುತ್ತಿರುವದು ಅಭಿನಂದನೀಯ.
ಇದಕ್ಕೂ ಮುನ್ನ ಗದಗ ಸಂಭ್ರಮ, ಪುಲಿಗೆರೆ ಉತ್ಸವ, ಬೆಂಗಳೂರಿನಲ್ಲಿ ಡ್ಯಾನ್ಸ್ ಪ್ರದರ್ಶನ ಕೊಡುವ ಮೂಲಕ ಹಲವು ಪ್ರಶಸ್ತಿಗಳನ್ನು ಮೂಡಿಗೆರಿಸಿಕೊಂಡಿದ್ದು, ನೃತ್ಯ, ಕರಾಟೆ ಸೇರಿದಂತೆ ಅನೇಕ ವಿಧದ ಪ್ರತಿಭೆ ಹೊಂದಿರುವ ಇವರು ಪೂರ್ವ ಪ್ರಾಥಮಿಕ ಹಂತದಿಂದಲೇ ಪ್ರತಿಯೊಂದು ಆಟೋಟಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಮೈಗೂಡಿಸಿಕೊಂಡಿದ್ದಾರೆ. ನೃತ್ಯ, ನಟನೆ ಎರಡರಲ್ಲೂ ಸೈ ಎನಿಸಿಕೊಂಡು, ಇದೀಗ ಕಾಮಿಡಿ ಕಿಲಾಡಿಯಲ್ಲಿ ಸ್ಪರ್ಧಿಸಿ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾನೆ. ಕನ್ನಡದ ರಿಯಾಲಿಟಿ ಶೋ ಡಿಕೆಡಿಗೆ ಆಯ್ಕೆ ಆಗಬೇಕು ಎನ್ನುವ ಆಸೆಯನ್ನೂ ಹೊಂದಿದ್ದಾರೆ.
ಅನೇಕ ಬಾರಿ ಆಡಿಷನ್ ಕೊಟ್ಟರೂ ಅದೃಷ್ಟ ಕೈ ಹಿಡಿಯಲಿಲ್ಲ. ಡ್ಯಾನ್ಸ್ನಲ್ಲಿ ಕೈ ಕೊಟ್ಟರೂ ಝೀ ಕನ್ನಡದ ಕಾಮಿಡಿ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಪ್ರಿಮಿಯರ್ ಲೀಗ್‌ನಲ್ಲಿ ಅದೃಷ್ಟ ಕೈ ಹಿಡಿದಿದ್ದು ರಾಜ್ಯದ ಜನತೆಯನ್ನು ಹಾಸ್ಯದ ಹೊನಲಲ್ಲಿ ತೇಲಿಸಿ ಎಲ್ಲರ ಮನ ಗೆದ್ದಿದ್ದಾರೆ. ಡ್ಯಾನ್ಸ್ ಕಲಿಯಬೇಕು ಎಂದು ಗದಗ ನಗರಕ್ಕೆ ಬಂದಾಗ ಸೋಮಶೇಖರ ಚಿಕ್ಕಮಠ ಎಂಬುವರು ಪರಿಚಯವಾಗಿ ಗದಗದ ನಟರಂಗದಲ್ಲಿ ಮಾಂತೇಶರಿಗೆ ನಟನೆ ಕಲಿಯಲು ವೇದಿಕೆ ಕಲ್ಪಿಸಿಕೊಟ್ಟರು.
ಕಷ್ಟಪಟ್ಟು ನಟರಂಗದಲ್ಲಿ ಸತತವಾಗಿ 6 ವರ್ಷದಿಂದ ನಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಉಮೇಶ ಕಿನ್ನಾಳ ಗುರುಗಳಾಗಿ ನಟನೆಯ ಎಲ್ಲ ಆಯಾಮಗಳನ್ನು ಹೇಳಿಕೊಟ್ಟಿದನ್ನು ನೆನಪಿಸಿಕೊಳ್ಳುತ್ತಾರೆ ಮಾಂತೇಶ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಶಾಲೆಯಲ್ಲಿ ಹಾಗೂ ಗದಗನ ಕೆಎಲ್‌ಇ ಸಂಸ್ಥೆಯ ಜ.ತೊಂಟದಾರ್ಯ ಕಾಲೇಜನಲ್ಲಿ ಪಿಯುಸಿ ಓದಿರುವ ಮಾಂತೇಶ ಸದ್ಯ ಅದೇ ಕಾಲೇಜನಲ್ಲಿ ಪದವಿ ಓದುತ್ತಿದ್ದಾರೆ. ಕರಾಟೆಯಲ್ಲಿಯೂ ಎಲ್ಲಾ ಹಂತದ ಬೆಲ್ಟ್ಗಳನ್ನು ಪಡೆದಿದ್ದಾರೆಂಬುದು ಇನ್ನೊಂದು ವಿಶೇಷ.
ಕಲಿಸಿದ ಗುರುಗಳು, ತಂದೆ-ತಾಯಿ, ಹಿರಿಯರು, ಅನೇಕರ ಪ್ರೋತ್ಸಾಹದಿಂದ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ. ಗದಗ ಜಿಲ್ಲೆಯಿಂದ ಕನ್ನಡ ಚಿತ್ರರಂಗದಲ್ಲಿ ನಟನಾಗಬೇಕು ಎಂಬ ಆಸೆಯಿದೆ.
– ಮಾಂತೇಶ ಕರಮಣ್ಣವರ.ಮಗನು ಡ್ಯಾನ್ಸ್ ಹಾಗೂ ನಟನೆಯಲ್ಲಿ ಸಾಧಿಸಿ ಊರಿಗೆ ಹೆಸರನ್ನು ತರಬೇಕು. ಅವನು ಚಿಕ್ಕಂದಿನಿಂದಲೂ ಡ್ಯಾನ್ಸ್, ನಟನೆ ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮ ಕೊಡುವ ಮೂಲಕ ಗಮನ ಸೆಳೆದಿದ್ದ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವದು ನಮ್ಮ ಆಸೆಯಾಗಿದೆ.
– ಮಲ್ಲೇಶಪ್ಪ, ಗಂಗವ್ವ.
ಮಾಂತೇಶರ ಪಾಲಕರು.


