ಚಿಕ್ಕಮಗಳೂರು:- ಸುವರ್ಣಸೌಧದಲ್ಲಿ ನನ್ನ ಮೇಲೆ ನಡೆದ ದಾಳಿ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.
ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಪರಿಷತ್ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನನಗೆ ಧಮ್ಕಿ ಹಾಕಿದ್ದಾರೆ. ಅವರ ಜೊತೆ ಡಿ.ಕೆ. ಶಿವಕುಮಾರ್, ಚನ್ನರಾಜ ಹಟ್ಟಿಹೊಳಿ ಕೂಡ ಧಮ್ಕಿ ಹಾಕಿದ್ದರು.
ಸುವರ್ಣಸೌಧದಲ್ಲೇ ನನ್ನ ಮೇಲೆ ದಾಳಿಗೆ ಪ್ರಯತ್ನ ನಡೆದಿತ್ತು. ಪೊಲೀಸರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರಿನ ಮೇರೆಗೆ ಕ್ರಮ ಕೈಗೊಳ್ಳುತ್ತಾರೆ. ಆದರೆ, ನಾನು ನೀಡಿದ ದೂರಿನ ಮೇಲೆ ಯಾಕೆ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ? ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನ ಪರಿಷತ್ನಲ್ಲಿ ನನ್ನ ತಾಯಿ, ತಂಗಿ, ಪತ್ನಿಯ ಬಗ್ಗೆ ಮಾತಾಡಿದರು. ಈ ಮಹಾತಾಯಿ ಮಾತನಾಡಿದ್ದನ್ನು ತಾವೆಲ್ಲರೂ ನೋಡಿದ್ದೀರಿ. ಅದು ಸರಿಯೇ? ಎಂದು ಪ್ರಶ್ನಿಸಿದರು.
ರಾತ್ರಿಯಿಡೀ 4 ಜಿಲ್ಲೆಗಳಲ್ಲಿ ವ್ಯಾನ್ನಲ್ಲಿ ನನ್ನನ್ನು ಸುತ್ತಾಡಿಸಿದ್ದಾರೆ. ಗೂಂಡಾಗಳು ನನ್ನ ಮೇಲೆ ಹಲ್ಲೆಗೈದ ಆಡಿಯೋ, ವಿಡಿಯೋ ಇದೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಎಂಎಲ್ಸಿ ಸಿ.ಟಿ. ರವಿ ಹೇಳಿದ್ದಾರೆ. ಈಗಾಗಲೇ ವಿಧಾನ ಪರಿಷತ್ ಸಭಾಪತಿಗೆ ದೂರು ಕೊಟ್ಟಿದ್ದೇವೆ.
ಈ ಬಗ್ಗೆ ಸಭಾಪತಿ ಏನು ಕ್ರಮ ಕೈಗೊಳ್ಳುತ್ತಾರೆ ಅಂತಾ ನೋಡಬೇಕು. ಖಾನಾಪುರದಲ್ಲಿ ನನ್ನ ಕೊಲೆ ಯತ್ನದ ಬಗ್ಗೆ ದೂರು ಕೊಟ್ಟಿದ್ದೇನೆ. ಆದರೆ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.