ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮದ ಗಡಾದ ಎಂಬ ಮುಸ್ಲಿಂ ಕುಟುಂಬವೊಂದು ಕಳೆದ 30 ವರ್ಷಗಳಿಂದ ಪ್ರತಿ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ನೆರವೇರಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಈ ಕುಟುಂಬದ ಯಜಮಾನ ಕುತ್ಬುದ್ದೀನಗೆ 30 ವರ್ಷಗಳ ಹಿಂದೆ ಅಂಗಡಿ ಇಟ್ಟವರೆಲ್ಲರೂ ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ, ನಾನೇಕೆ ಮಾಡಬಾರದು ಎಂಬ ಆಲೋಚನೆ ಹೊಳೆಯಿತು. ವಿಚಾರ ಬಂದಷ್ಟೇ ವೇಗವಾಗಿ ಅದನ್ನು ಕಾರ್ಯರೂಪದಲ್ಲಿಯೂ ತಂದ ಕುತ್ಬುದ್ದೀನ, ಈಗ ಲಕ್ಷ್ಮಿ ಕಟಾಕ್ಷದಿಂದ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದಾರೆ.
ಆಗ ಕತ್ಬುದ್ದೀನ ಅವರದು ಸೈಕಲ್ ಅಂಗಡಿ ಇತ್ತು. ಈ ಅಂಗಡಿಯಲ್ಲಿ ಎಲ್ಲರೂ ಕೂರಿಸುವ ಹಾಗೆ ಲಕ್ಷ್ಮಿಯನ್ನು ಸರ್ವಾಲಂಕೃತಳಾಗಿ ಕೂರಿಸಿ, ಪುರೋಹಿತರನ್ನು ಕರೆದು ಹಿಂದೂ ಪದ್ಧತಿಯಂತೆ ಶ್ರೀ ಲಕ್ಷ್ಮಿ ಪೂಜೆಯನ್ನು ನೆರವೇರಿಸುತ್ತ ಬಂದರು. ಈ ಪೂಜೆಗೆ ಗ್ರಾಮದ ಸರ್ವ ಧರ್ಮೀಯರನ್ನೂ ಕರೆದು ಅನ್ನಸಂತರ್ಪಣೆಯನ್ನೂ ಸಹ ಮಾಡುತ್ತ ಬಂದಿದ್ದಾರೆ. ಈ ಕಾರ್ಯದಲ್ಲಿ ಅವರ ಮನೆಯವರೆಲ್ಲರ ಸಹಕಾರ ಇದ್ದೇ ಇದೆ. ಗ್ರಾಮದ ಎಲ್ಲ ಜನರೂ ಸಹ ಕುತ್ಬುದ್ದೀನರವರ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿ ಬೆಂಬಲಿಸುತ್ತಿರುವುದರಿಂದ ಶ್ರೀ ಲಕ್ಷ್ಮಿ ಪೂಜಾ ಕಾರ್ಯವು ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ.
ಸೈಕಲ್ಗಳೇ ಕಾಣೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಸೈಕಲ್ ಅಂಗಡಿಯನ್ನು ಬಂದ್ ಮಾಡಿ ಈಗ ಪಂಕ್ಚರ್ ತಿದ್ದುವ ಅಂಗಡಿಯನ್ನು ನಡೆಸುತ್ತಿರುವ ಕುತ್ಬುದ್ದೀನ, ಆ ಅಂಗಡಿಯಲ್ಲಿಯೆ ಕಳೆದ ಐದಾರು ವರ್ಷಗಳಿಂದ ಲಕ್ಷ್ಮಿ ಪೂಜೆ ನೆರವೇರಿಸುತ್ತಿದ್ದಾರೆ. ಈ ಸಾರೆಯೂ ಅವರು ಪೂಜೆ ನೆರವೇರಿಸಿದ್ದಕ್ಕೆ ಗ್ರಾಮದ ಸಮಸ್ತರೂ ಅವರನ್ನು ಅಭಿನಂದಿಸಿದ್ದಾರೆ.
ನಾನು ಈ ಪೂಜೆಯನ್ನು ಮಾಡುತ್ತ ಬಂದಿರುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ. ನನಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಲಕ್ಷ್ಮಿಯ ಆಶೀರ್ವಾದದಿಂದ ಎಲ್ಲರ ಮದುವೆಯನ್ನು ಮಾಡಿರುವೆ. ಒಂದು ಗುಂಟೆ ಜಾಗೆಯನ್ನೂ ಹಿಡಿದು ಮನೆ ಹಾಕಿಸಿರುವೆ. ಐವರು ಮೊಮ್ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದೇನೆ. ನನ್ನ ಹೆಂಡತಿ ರಾಜಮಾಬೇಗಂ, ಮಕ್ಕಳಾದ ಕಾಶಿಮಸಾಬ್, ಫಜಲ್ಅಹ್ಮದ್, ನಜೀರ್ಅಹ್ಮದ್, ಸೊಸೆಯಂದಿರಾದ ನಯೀಂನಜೀಯಾ, ಫರೀನಾಬಾನು, ತಸ್ಮಿಯಾ ಮತ್ತು ಮಗಳಾದ ಸಫರಾಬೇಗಂ, ಅಳಿಯ ಯಮನೂರಸಾಬ್ ಎಲ್ಲರೂ ಸಹಕಾರ ನೀಡುತ್ತಿದ್ದಾರೆ.
– ಕುತ್ಬುದ್ದೀನ.ಗಡಾದರವರು ಆಚರಿಸುವ ಪೂಜೆಯನ್ನು ನಾವೂ ನೋಡುತ್ತ ಬಂದಿದ್ದೇವೆ. ಅಂಗಡಿಗೆ ತಳಿರು-ತೋರಣ, ವಿದ್ಯುತ್ ದೀಪಗಳ ಅಲಂಕಾರ, ಹಣತೆ ಹಚ್ಚಿ, ಜ್ಯೋತಿ ಬೆಳಗಿಸಿ ಹಿಂದೂ ಸಂಪ್ರದಾಯದಂತೆ ಲಕ್ಷ್ಮಿದೇವಿಗೆ ಹೋಳಿಗೆ, ಕರಿಗಡಬು ನೈವೇದ್ಯ, ವಿವಿಧ ತರಹದ ಹಣ್ಣು-ಕಾಯಿ, ಹೊಸ ಸೀರೆ ಉಡಿಸಿ ಪೂಜಿಸುವುದನ್ನು ಕಾಣುವುದೇ ಒಂದು ಸೊಗಸು.
-ಸಂಗಮೇಶ ಮೆಣಿಸಿಗಿ.
ಗ್ರಾಮಸ್ಥರು.