ಬೆಂಗಳೂರು: ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಡ್ರಿಫ್ಟಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಪ್ರಕರಣದಲ್ಲಿ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಹೆಸರು ಕೇಳಿಬಂದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ. ಬಳಿಕ ರಿಕ್ಕಿ ರೈ ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.
ಮಾರ್ಚ್ 21ರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಲ್ಯಾಂಬೋರ್ಗಿನಿ ಕಾರು ಶಿವಾಜಿನಗರ ಕಡೆಯಿಂದ ಅತಿ ವೇಗವಾಗಿ ಬಂದು ಅನಿಲ್ ಕುಂಬ್ಳೆ ವೃತ್ತದಲ್ಲಿ ಎರಡು ಸುತ್ತು ತಿರುಗಿದ ನಂತರ ಮತ್ತೆ ವೇಗವಾಗಿ ತೆರಳಿದ ಘಟನೆ ನಡೆದಿದೆ. ಈ ಅಪಾಯಕಾರಿ ಚಾಲನೆಯ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಂತರ ವೈರಲ್ ಆಗಿದೆ.
ಪೊಲೀಸರು ಕಾರು ಸಂಚರಿಸಿದ ಮಾರ್ಗದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ರಿಕ್ಕಿ ರೈ ಕಾರು ಚಾಲನೆ ಮಾಡಿರುವ ಸಾಧ್ಯತೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಎಂವಿ 184, 189 ಹಾಗೂ ಬಿಎನ್‌ಎಸ್ 281 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಲ್ಯಾಂಬೋರ್ಗಿನಿ ಕಾರು ರಿಕ್ಕಿ ರೈ ಅವರದೇ ಎಂಬುದು ತಿಳಿದುಬಂದಿದ್ದು, ಸದಾಶಿವನಗರದಲ್ಲಿನ ಅವರ ನಿವಾಸದಿಂದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಘಟನೆಯ ಸಮಯದಲ್ಲಿ ಕಾರು ಯಾರಿಂದ ಚಾಲನೆ ಮಾಡಲ್ಪಟ್ಟಿತ್ತು ಎಂಬುದರ ಕುರಿತು ಪೊಲೀಸರು ಇನ್ನೂ ತನಿಖೆ ಮುಂದುವರೆಸಿದ್ದಾರೆ.



