ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತಿ ಪಡೆದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಧಾರ್ಮಿಕ, ಸಾಮಾಜಿಕ, ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂಗಮ. ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಾಡಿನ ಅನೇಕ ಭಕ್ತರು ವಿವಿಧ ವಿಶಿಷ್ಟ ಭಕ್ತಿ ಸೇವೆಗಳನ್ನು ಸಲ್ಲಿಸುವುದರ ಮೂಲಕ ಭಕ್ತಿ ಅರ್ಪಿಸುವದು ಅಪ್ಯಾಯಮಾನ. ಹಾಗೆಯೇ ಜಹಗಿರ್ ಗುಡುದೂರಿನ ಸ್ನೇಹಜೀವಿ ಲೈಟಿಂಗ್ ಅರೇಂಜ್‌ಮೆಂಟ್ ಸೇವಾ ಮಂಡಳಿಯಿಂದ ಮಹಾ ಜಾತ್ರೋತ್ಸವಕ್ಕೆ ವಿವಿಧ ಬಣ್ಣ ಬಣ್ಣದ ವಿಶಿಷ್ಟ ಆಕರ್ಷಕ ಲೈಟಿಂಗ್‌ಗಳನ್ನು ಗಂಜವೃತ್ತದಲ್ಲಿರುವ ಶ್ರೀ ಗವಿಸಿದ್ದೇಶ್ವರ ಮಹಾದ್ವಾರಕ್ಕೆ ತಮ್ಮ ಸೇವಾ ಸಮಿತಿ ವತಿಯಿಂದ ಉಚಿತವಾಗಿ ಅಣಿಳಿಸುವ ಮೂಲಕ ಜಾತ್ರೆಯ ಅಲಂಕಾರಕ್ಕೆ ಮತ್ತಷ್ಟು ಮೆರಗು ತಂದಿದ್ದಾರೆ.
ಭಕ್ತರಿಗೆ ಆಹ್ವಾನ ನೀಡುವ, ಸ್ವಾಗತ ಕೋರುವ, ಹೂವು, ಗವಿಶ್ರೀ ಹೆಸರು, ಹೆಲಿಕ್ಯಾಪ್ಟರ್, ಛತ್ರಿ, ಶ್ರೀಶಿವಶಾಂತವೀರ ಸ್ವಾಮೀಜಿಯವರ ಭಾವಚಿತ್ರವಿರುವ ವಿವಿಧ ಬಣ್ಣ ಬಣ್ಣದ ವಿದ್ಯುತ್ ದೀಪ ಅಲಂಕಾರ ಮಾಡಿದ್ದಾರೆ. 7 ಜನ ಯುವಕರು ಒಂದು ದಿನ ಪೂರ್ತಿಯಾಗಿ ಈ ದೀಪಾಲಂಕಾರದ ಕಾರ್ಯದಲ್ಲಿ ತೊಡಗಿಕೊಂಡು ಸೇವೆಗೈದಿದ್ದಾರೆ. ಶ್ರೀ ಗವಿಸಿದ್ದೇಶ್ವರ ದ್ವಾರಬಾಗಿಲು ಈಗಾಗಲೇ ನೋಡಲು ಭವ್ಯವಾಗಿದ್ದು, ವಿದ್ಯುತ್ ದೀಪ ಅಲಂಕಾರಗಳಿಂದ ದ್ವಾರಬಾಗಿಲಿನ ಸೌಂದರ್ಯ ದುಪ್ಪಟ್ಟುಗೊಂಡು ನೋಡುಗರ ಆಕರ್ಷಣೆಗೆ ಕಾರಣವಾಗಿದೆ. ಯುವಕರ ಭಕ್ತಿಯ ಸೇವೆಯನ್ನು ಪರಮ ಪೂಜ್ಯರು ಪ್ರಶಂಶಿಸಿ ಆಶೀರ್ವದಿಸಿದ್ದಾರೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.