ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ದೀಪಗಳು ಶುದ್ಧತೆಯ ಪ್ರತೀಕವಾಗಿದ್ದು, ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿಗಳು ಹೇಳಿದರು.
ಪಟ್ಟಣದ ಹರಿಹರ ರಸ್ತೆಯ ಆದಿಬಸವೇಶ್ವರನಗರದ ಶ್ರೀ ವರತೇ ಭೂತಪ್ಪ ಸ್ವಾಮಿ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕಾರ್ತಿಕೋತ್ಸವದ ಅಂಗವಾಗಿ ಜರುಗಿದ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ದೇಹದಿಂದ ಕತ್ತಲೆಯನ್ನು ಅಂದರೆ ಅಜ್ಞಾನ, ಕೋಪ, ಅಸೂಯೆ ಮುಂತಾದವುಗಳನ್ನು ತೊಲಗಿಸಿ, ಆತ್ಮಜ್ಞಾನವನ್ನು ಹೆಚ್ಚಿಸಲು ದೀಪಾರಾಧನೆ ಸಹಕಾರಿ. ದೀಪಗಳು ಶುದ್ಧತೆಯ ಪ್ರತೀಕವಾಗಿದ್ದು, ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ದೀಪ ಬೆಳಗಿಸುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದ್ದು, ಮನುಷ್ಯರನ್ನು ಮನುಷ್ಯರಾಗಿ ಕಾಣುವಂತೆ ಆಗಲಿ ಎಂದರು.
ಮುತ್ತಿಗಿಯ ಹಾಲಸ್ವಾಮಿ ಮಠದ ಹಾಲಸ್ವಾಮೀಜಿ ಮಾತನಾಡಿ, ಕತ್ತಲಿನಿಂದ ಬೆಳಕಿಗೆ ತೆರಳುವ ಸಮಯದಲ್ಲಿ ಭಕ್ತರ ಮನದಲ್ಲಿ ಜ್ಯೋತಿ ಬೆಳಗಲಿ, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲಿ ಎಂದರು.
ಶ್ರೀ ಶರಣಬಸವ ಬುದ್ಧ ಭೀಮಜೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡಗತ್ತಿ ಕೋಟ್ರಪ್ಪ ಮಾತನಾಡಿ, ಕತ್ತಲಿನಿಂದ ಬೆಳಕಿನ ಕಡೆಗೆ ದಾರಿ ತೋರಿಸುವ ದೀಪಗಳ ಹಬ್ಬವೇ ಕಾರ್ತಿಕೋತ್ಸವ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಮಹಾವಿಷ್ಣುವು ಶಯನವನ್ನು ಪ್ರಾರಂಭಿಸುತ್ತಾನೆ. ನಂತರ ಕಾರ್ತಿಕ ಮಾಸದ ಏಕಾದಶಿಯಂದು ನಿದ್ದೆಯಿಂದ ಏಳುತ್ತಾನೆ. ಈ ದಿನವನ್ನು ಪ್ರಬೋಧಿನಿ ಏಕಾದಶಿ ಎಂದು ಕರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ವಿಷ್ಣುವು ನಿದ್ರೆಯಿಂದ ಎಚ್ಚರಗೊಂಡು ಇಡೀ ಸೃಷ್ಟಿಯ ಮೇಲೆ ಸಂತೋಷ ಮತ್ತು ಅನುಗ್ರಹವನ್ನು ನೀಡುತ್ತಾನೆ ಎಂಬ ನಂಬಿಕೆಯಿದೆ ಎಂದರು.
ನಾಗಲಾಪುರದ ಶ್ರೀಗಳು, ಬೆಣ್ಣಿಹಳ್ಳಿಯ ಪಂಚಾಕ್ಷರಿ ಶ್ರೀಗಳು, ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೆ.ಉಚ್ಚೆಂಗೆಪ್ಪ, ಗೊಂದಾಳಿ ಸಮಾಜದ ರಾಜ್ಯ ಅಧ್ಯಕ್ಷ ಗೊಂದಾಳಿ ಗೋಪಾಲ ಮಾತನಾಡಿದರು. ಅರಸಿಕೇರಿಯ ಕೋಟ್ರಯ್ಯ ಸ್ವಾಮೀಜಿ, ಅಜ್ಜಯ್ಯ ಸ್ವಾಮಿ ಮಠದ ವೀರಣ್ಣ ಸಾನ್ನಿಧ್ಯ ವಹಿಸಿದ್ದರು.
ನಿಸರ್ಗ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕಲ್ಯಾಣದವರ್, ನಾಟಿ ವೈದ್ಯರ ಸಂಘದ ತಾಲೂಕಾಧ್ಯಕ್ಷ ಇಬ್ರಾಹಿಂ ಸಾಹೇಬ್, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ರೇಣುಕಾಬಾಯಿ, ಮೇದಾರ ಸಮಾಜದ ಕೃಷ್ಣಪ್ಪ, ಶಿಕ್ಷಕರಾದ ಹೆಗ್ಗಪ್ಪ, ಮೈಲಾರಪ್ಪ, ಚೀಗಟೇರಿ ಕರಿಬಸಪ್ಪ, ರಾಮಚಂದ್ರಪ್ಪ, ಮೋತಿ ಮಾರುತಿ, ಕಲಾವಿದ ತಿಮ್ಮಣ್ಣ, ಅಣ್ಣಪ್ಪ ಸೇರಿದಂತೆ ಇತರರು ಇದ್ದರು.
ಪ್ರಧಾನ ಅರ್ಚಕರಾದ ವಿ. ಸಣ್ಣ ಅಜ್ಜಯ್ಯ ಮಾತನಾಡಿ, ಕಾರ್ತಿಕ ಮಾಸದಲ್ಲಿ ಕೈಗೊಳ್ಳುವ ವ್ರತ, ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ಅತ್ಯಂತ ಶ್ರೇಷ್ಠತೆಯಿಂದ ಕೂಡಿದ್ದು, ಹೆಚ್ಚು ಫಲಪ್ರಾಪ್ತಿ ಆಗುತ್ತದೆ. ಕಾರ್ತಿಕ ಮಾಸದಲ್ಲಿ ನಿಯಮ-ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿದಿನ ತುಳಸಿ ಗಿಡದ ಬಳಿ ದೀಪವನ್ನು ಹಚ್ಚಿದರೆ ಶುಭ. ಕಾರ್ತಿಕ ಮಾಸದಲ್ಲಿ ಜ್ಯೋತಿ ಬೆಳಗುವ ಮೂಲಕ ಮನಸ್ಸಿನಲ್ಲಿರುವ ಅಂಧಕಾರವನ್ನು ದೂರ ಮಾಡಿಕೊಳ್ಳಬಹುದು ಎಂದರು.



