ಹಾನಗಲ್: ಕಾಡು ಪ್ರಾಣಿಗಳ ಬೇಟೆಗಾಗಿ ಅಕ್ರಮವಾಗಿ ಇಟ್ಟಿದ್ದ ನಾಡ ಬಾಂಬ್ ಸ್ಫೋಟಗೊಂಡ ಪರಿಣಾಮ ಎರಡು ಹೋರಿಗಳು ಸಾವನ್ನಪ್ಪಿರುವ ಭೀಕರ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೀರೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಸಿಗಿಗುಂಡಿ ಪ್ರದೇಶದ ಕಾಡಿನಲ್ಲಿ, ವನ್ಯಜೀವಿಗಳು ನೀರು ಕುಡಿಯುವ ಉದ್ದೇಶದಿಂದ ತೋಡಿದ್ದ ನೀರಿನ ಗುಂಡಿಯ ಬಳಿ ಕಿಡಿಗೇಡಿಗಳು ನಾಡ ಬಾಂಬ್ ಅಳವಡಿಸಿದ್ದರು. ನೀರು ಕುಡಿಯಲು ಬಂದಿದ್ದ ಎರಡು ಹೋರಿಗಳು ಬಾಂಬ್‌ನ್ನು ಕಚ್ಚಿದ ಕ್ಷಣವೇ ಭಾರೀ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಹೋರಿಗಳ ಬಾಯಿ ಸಂಪೂರ್ಣವಾಗಿ ಛಿದ್ರ-ಛಿದ್ರಗೊಂಡು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿವೆ. ಮೃತ ಹೋರಿಗಳು ಹೀರೂರು ಗ್ರಾಮದ ರೈತ ಶೇಖಪ್ಪ ಮೇಳ್ಳಿಹಳ್ಳಿ ಅವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ. ಲಕ್ಷಾಂತರ ರೂ. ಮೌಲ್ಯದ ಹೋರಿಗಳನ್ನು ಕಳೆದುಕೊಂಡ ರೈತ ಶೋಕದಲ್ಲಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಹಾನಗಲ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಿನ ನೀರಿನ ಗುಂಡಿಗಳ ಸುತ್ತಮುತ್ತ ಇನ್ನೂ ನಾಡ ಬಾಂಬ್‌ಗಳನ್ನು ಇಟ್ಟಿರುವ ಸಾಧ್ಯತೆ ಇದ್ದು, ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕಾಡು ಪ್ರಾಣಿಗಳ ಬೇಟೆಗಾಗಿ ಇಡಲಾದ ನಾಡ ಬಾಂಬ್‌ಗಳೇ ಈ ದುರ್ಘಟನೆಗೆ ಕಾರಣ ಎಂದು ಶಂಕಿಸಲಾಗಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.



