ಬೆಂಗಳೂರು:– ಜಿಂದಾಲ್‌ಗೆ ಭೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗರಿಗೂ, ಹೈಕಮಾಂಡಿಗೂ ಹಣ ಸಂದಾಯ ಆಗಿರಬಹುದು ಎಂದು ಸಿ.ಟಿ ರವಿ ಹೇಳಿದ್ದಾರೆ.
ಈ ಹಿಂದೆ ಜಿಂದಾಲ್‌ಗೆ ಭೂಮಿ ಕೊಡಲು ಕಾಂಗ್ರೆಸ್ಸಿಗರು ವಿರೋಧಿಸಿದ್ದರು. ಈಗ ಕೊಡುತ್ತಿದ್ದಾರೆ ಅಂದ್ರೆ ಕಾಂಗ್ರೆಸ್ಸಿಗರಿಗೂ, ಅವರ ಹೈಕಮಾಂಡಿಗೂ ದೊಡ್ಡ ಪ್ರಮಾಣದ ಮೊತ್ತ ಸಂದಾಯ ಆಗಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಂಶಯ ವ್ಯಕ್ತಪಡಿಸಿದ್ದಾರೆ.
ಜಿಂದಾಲ್ ಕಂಪನಿಗೆ ಸುಮಾರು 3,677 ಎಕರೆ ಭೂಮಿ ಕೊಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಇದ್ದಾಗ ಈ ಪ್ರಸ್ತಾವನೆ ಬಂದಿತ್ತು. ನಾವೆಲ್ಲರೂ ಒಳಗಡೆಯೂ ವಿರೋಧ ಮಾಡಿದ್ದೆವು. ಕಾಂಗ್ರೆಸ್‌ನವರು ಬಹಿರಂಗವಾಗಿ ಭೂ ಮಾರಾಟವನ್ನು ವಿರೋಧಿಸಿದ್ದರು. ಇದು ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್ ಎಂದು ನಮ್ಮ ಮೇಲೆ ಕಾಂಗ್ರೆಸ್‌ನವರು ಆರೋಪಿಸಿದ್ದರು. ಒಂದು ಎಕರೆಗೆ 1.22 ಲಕ್ಷ ರೂ. ಕೊಡುವುದು ಎಂದರೇನು? ಎಂಬ ಮಾತನ್ನು ನಮ್ಮ ಮೇಲೆ ಆರೋಪಿಸಿದ್ದರು. ಆಗ ಆರೋಪಿಸಿದವರೇ ಭೂಮಿ ಕೊಟ್ಟಿದ್ದಾರೆ. ಹಾಗಿದ್ದರೆ ನೀವು ಎಷ್ಟು ಕಿಕ್‌ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಕೈಗಾರಿಕೆ ಖಾತೆ ಸಚಿವರು ಈ ಕುರಿತು ಬಿಜೆಪಿ ಆಡಳಿತದಲ್ಲಿರುವಾಗಲೇ ನಿರ್ಧಾರ ಆಗಿತ್ತು ಎಂದಿದ್ದರು. ಮಾನ್ಯ ಎಂ.ಬಿ.ಪಾಟೀಲರೇ, ನಮ್ಮ ಅವಧಿಯಲ್ಲಿ ಪ್ರಸ್ತಾಪ ಬಂದಿದ್ದು ನಿಜ. ನಮ್ಮಂಥ ಹಲವರು ವಿರೋಧಿಸಿದ್ದ ಕಾರಣಕ್ಕೆ ಪ್ರಸ್ತಾಪವನ್ನು ಅಲ್ಲಿಗೇ ಕೈಬಿಟ್ಟಿದ್ದೆವು. ನೀವ್ಯಾಕೆ ಅದನ್ನು ಮಾಡುತ್ತೀರಿ? ಬಿಜೆಪಿ ಕಂಡರೆ ಆಗದವರು ಬಿಜೆಪಿ ನಿರ್ಧಾರವನ್ನು ಯಾಕೆ ಮುಂದುವರೆಸಬೇಕು ಎಂದು ಕೆಣಕಿದ್ದಾರೆ.