‘ಕಾಟೀರ’ ಚಿತ್ರದ ನಂತರ ನಾನು ಯಾವುದೇ ಚಲನಚಿತ್ರವನ್ನು ನೋಡಿರಲಿಲ್ಲ. ಆದರೆ ಸಮಯಾವಕಾಶ ಸಿಕ್ಕ ಹಿನ್ನೆಲೆಯಲ್ಲಿ, ಅನೇಕ ಪ್ರಗತಿಪರ ಚಿಂತಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದ ದುನಿಯಾ ವಿಜಯ್ ಅವರ ‘ಲ್ಯಾಂಡ್ ಲಾರ್ಡ್’ ಚಿತ್ರವನ್ನು ನೋಡಲು ನಿರ್ಧರಿಸಿದೆ.
ಚಿತ್ರ ಆರಂಭವಾದ ಕೆಲವೇ ಕ್ಷಣಗಳಲ್ಲಿ, ನನಗೆ ಪರಿಚಿತವಾಗಿದ್ದ ಒಂದು ಘಟನೆ ಕಣ್ಣಮುಂದೆ ಜೀವಂತವಾಗಿ ನಿಂತಿತು. ಭೂರಹಿತ ದಲಿತನೊಬ್ಬ ಸಾವುಕಾರನ ಹೊಲದಲ್ಲಿ ಹಸಿವಿನಿಂದ ಕಡಲೆ ಗಿಡ ಕಿತ್ತು ತಿಂದಿದ್ದು ತಪ್ಪು ಎಂದು ತೀರ್ಪು ನೀಡಿದ ನ್ಯಾಯ ಪಂಚಾಯ್ತಿ, ಅದೇ ವೇಳೆ “ಕದ್ದು ತಿಂದವನ ಹೆಂಡತಿಯ ಮೇಲೂ ನನಗೆ ಆಸೆ ಇದೆ, ಅದಕ್ಕೂ ಅನುಮತಿ ಕೊಡಿ” ಎಂದು ಸಾವುಕಾರ ಹೇಳಿದ ಆ ಕ್ರೂರ ಮಾತು — ಅದು ಅತ್ಯಾಚಾರದಷ್ಟೇ ಸಮಾನವಾದ ಮನಸ್ಥಿತಿಯ ಪ್ರತೀಕವಾಗಿತ್ತು. ಇಂತಹ ಅನೇಕ ಜೀವಂತ ನಿದರ್ಶನಗಳ ಪ್ರತಿನಿಧಿತ್ವವೇ ‘ಲ್ಯಾಂಡ್ ಲಾರ್ಡ್’.
ಚಿತ್ರವನ್ನು ನೋಡುತ್ತಾ ಹೋದಂತೆ ಹಳ್ಳಿಕೇರಿ, ಹಾಳಕೇರಿ, ರೋಣದ ‘ಭೂಮಿ ಬೇಕು’ ರೈತ ಆಂದೋಲನ, ಇನಾಮವೀರಾಪುರ ಘಟನೆ, ಕಂಬಾಳಪಳ್ಳಿ–ಹಂಗರಹಳ್ಳಿ ಹತ್ಯಾಕಾಂಡಗಳು ಒಂದೊಂದಾಗಿ ಸ್ಮೃತಿ ಪಟಲದಲ್ಲಿ ಪ್ಲೇ ಆದವು. ಇವುಗಳೆಲ್ಲವೂ ಕೇವಲ ಇತಿಹಾಸವಲ್ಲ; ಇನ್ನೂ ಹಸಿಹಸಿಯಾಗಿ ನಮ್ಮ ಸಮಾಜವನ್ನು ಕಾಡುತ್ತಿರುವ ಸತ್ಯಗಳು.
ಬದುಕಲು ಬೇಕಾದ ಅನ್ನಕ್ಕಾಗಿ ಕೈಯೊಡ್ಡಿ ಬೇಡಬೇಕು, ಆದರೆ ಅನ್ನ ಬೆಳೆಯುವ ಭೂಮಿಯ ಮೇಲೆ ಹಕ್ಕು ಇರಬಾರದು ಎಂಬ ಜಮೀನ್ದಾರರ ವಿಕೃತ ಮನಸ್ಸು; ದಲಿತರಿಗೆ ಭೂಮಿ ಒಡೆತನ ಇರಬಾರದೆಂಬ ಕಾರಣಕ್ಕೆ ದೇವರ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ವಿಧಿಸಲಾಗುವ ನಾನಾ ಕಟ್ಟಳೆಗಳು; ದಿನನಿತ್ಯದ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಾಗಿರುವ ದೌರ್ಜನ್ಯಗಳು — ಈ ಎಲ್ಲವನ್ನೂ ‘ಲ್ಯಾಂಡ್ ಲಾರ್ಡ್’ ತನ್ನ ಕಥಾಹಂದರದಲ್ಲಿ ಗಂಭೀರವಾಗಿ ಹಿಡಿದಿಟ್ಟಿದೆ. ಅದಕ್ಕೇ ಈ ಚಿತ್ರ ಮನಮುಟ್ಟುತ್ತದೆ.
ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಶೋಷಣೆಯನ್ನು ಎದುರಿಸಲು ಪಾರಂಪರಿಕ ಕಂದಾಚಾರಗಳನ್ನು ಮೀರಿ, ಸಂವಿಧಾನದ ಮಾರ್ಗದ ಮೂಲಕ ಮುಕ್ತಿಯತ್ತ ಸಾಗಬೇಕು ಎಂಬ ಬಲವಾದ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಶೋಷಣೆಯ ವಿರುದ್ಧ ಸಂವಿಧಾನವೇ ಶಸ್ತ್ರ ಎಂಬ ಅರಿವು ಮೂಡಿಸುತ್ತದೆ.
ನಾನು ಸಂವಿಧಾನದ ಕಾಲಾಳು ಆಗಿ, ಸಂವಿಧಾನ ರಕ್ಷಣೆಗೆ ಸಿದ್ಧವೆಂದು ಸಹಿ ಮಾಡಿರುವ ವ್ಯಕ್ತಿಯಾಗಿ, ಈ ಚಿತ್ರ ನನಗೆ ವಿಶೇಷ ಸಂತಸ ತಂದಿದೆ. ಇಂದಿನ ತುರ್ತು ಅಗತ್ಯವೇನೆಂದರೆ — ಪ್ರತಿ ಮನೆಮನೆಯಲ್ಲೂ ಸಂವಿಧಾನದ ಆಶಯವನ್ನು ತಲುಪಿಸುವ ಚಿಂತನೆ ಮತ್ತು ಚಳವಳಿ.
ಇಂತಹ ಸಾಮಾಜಿಕ ಹೊಣೆಗಾರಿಕೆಯ ಸಿನಿಮಾಗಳು ಇನ್ನಷ್ಟು ಹೆಚ್ಚು ಬರಬೇಕು. ‘ಲ್ಯಾಂಡ್ ಲಾರ್ಡ್’ ಅದಕ್ಕೆ ಒಂದು ಮಹತ್ವದ ಉದಾಹರಣೆ.
-ಬಸವರಾಜ ನಿಂ ಸಂಶಿ, ವಕೀಲರು.



