ಗ್ಯಾಂಗ್ಟಾಕ್: ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ಸುಮಾರು 200ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಚುಂಗ್ಥಾಂಗ್–ಲಾಚೆನ್ ಮಾರ್ಗದ ಹಲವೆಡೆ ಭೂಕುಸಿತ ಸಂಭವಿಸಿದ್ದು, ಲಾಚೆನ್ ಕಡೆಗೆ ತೆರಳುತ್ತಿದ್ದ ಪ್ರವಾಸಿಗರು ಮಧ್ಯದಲ್ಲೇ ಸಿಲುಕಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿಗರಿಗೆ ಐಟಿಬಿಪಿ ಶಿಬಿರ ಹಾಗೂ ಸ್ಥಳೀಯ ಗುರುದ್ವಾರದಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ ಎಂದು ಮಂಗನ್ ಜಿಲ್ಲೆಯ ಕಲೆಕ್ಟರ್ ಅನಂತ್ ಜೈನ್ ತಿಳಿಸಿದ್ದಾರೆ.
ಭೂಕುಸಿತದಿಂದ ರಸ್ತೆಗಳ ಮೇಲೆ ಬಿದ್ದಿರುವ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಹವಾಮಾನ ಸ್ಥಿತಿಗತಿಗಳನ್ನು ಅವಲಂಬಿಸಿ ಮಾರ್ಗವನ್ನು ಸುರಕ್ಷಿತ ಎಂದು ಘೋಷಿಸಿದ ಬಳಿಕವೇ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ಇತ್ತೀಚಿನ ಭಾರೀ ಹಿಮಪಾತದ ಹಿನ್ನೆಲೆ ತ್ಸೊಮ್ಗೊ ಸರೋವರ ಮತ್ತು ನಾಥುಲಾ ಪಾಸ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
2023ರಲ್ಲಿ ಸಂಭವಿಸಿದ್ದ ಹಿಮನದಿ ಸರೋವರ ಪ್ರವಾಹದಿಂದ ಹಾನಿಗೊಂಡ ಲಾಚೆನ್ ಮಾರ್ಗವನ್ನು ಇತ್ತೀಚೆಗೆ ಮಾರ್ಚ್ 9ರಂದು ಮತ್ತೆ ತೆರೆಯಲಾಗಿತ್ತು.



