ನವದೆಹಲಿ: ವೈಷ್ಣೋದೇವಿ ಯಾತ್ರೆಯ ಮಾರ್ಗದಲ್ಲಿ ಭೂಕುಸಿತ ಉಂಟಾಗಿ 32 ಜನ ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತದಿಂದ ಸಂಭವಿಸಿದ ಜೀವಹಾನಿ ಬಹಳ ದುಃಖಕರವಾಗಿದೆ.
ದುಃಖಿತ ಕುಟುಂಬಗಳೊಂದಿಗೆ ನಾವು ಸದಾ ಇರುತ್ತೇವೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಸರ್ಕಾರವು ಎಲ್ಲರಿಗೂ ಸಹಾಯ ಮಾಡುತ್ತಿದೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನನ್ನ ಪ್ರಾರ್ಥನೆಗಳು” ಎಂದಿದ್ದಾರೆ.
ಇನ್ನೂ ವೈಷ್ಣೋದೇವಿ ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ನಿರಂತರ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ. ಕತ್ರಾದಿಂದ ದೇಗುಲಕ್ಕೆ ಹೋಗುವ 12 ಕಿ.ಮೀ. ಚಾರಣದ ಅರ್ಧದಾರಿಯಲ್ಲಿ ಭೂಕುಸಿತ ಸಂಭವಿಸಿದೆ.
ಈ ದೇಗುಲಕ್ಕೆ ಎರಡು ಮಾರ್ಗಗಳಿವೆ. ಬೆಳಿಗ್ಗೆಯಿಂದ ಹಿಮಕೋಟಿ ಚಾರಣದ ಮಾರ್ಗದಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮಧ್ಯಾಹ್ನ 1.30ರವರೆಗೆ ಹಳೆಯ ಮಾರ್ಗದಲ್ಲಿಯೇ ಯಾತ್ರೆ ಸಾಗುತ್ತಿತ್ತು. ಧಾರಾಕಾರ ಮಳೆಯಿಂದಾಗಿ ಮುಂದಿನ ಆದೇಶದವರೆಗೆ ಅದನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.