ವಿಜಯಸಾಕ್ಷಿ ಸುದ್ದಿ, ಗದಗ: ಬೆಳಗಾವಿ ಸುವರ್ಣ ಸೌಧದ ಸಮೀಪದಲ್ಲಿ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಮುಖಂಡರ ಮೇಲೆ ಅಮಾನವೀಯವಾಗಿ ಲಾಠಿಚಾರ್ಜ್ ನಡೆಸಿರುವುದನ್ನು ಖಂಡಿಸಿ, ಸಮಾಜ ಬಾಂಧವರು ಗುರುವಾರ ಜಿಲ್ಲೆಯಾದ್ಯಂತ ಪ್ರತಿಭಟನೆ, ರಸ್ತೆ ತಡೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ನಗರದ ಜನರಲï ಕಾರ್ಯಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಹಲವು ಮುಖಂಡರು, ಯುವಕರು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೃಷಿಯನ್ನೇ ನಂಬಿ ಬದುಕುತ್ತಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದು ಕೇಳಿದರೆ ಲಾಠಿ ಏಟು ನೀಡಿದ ಮುಖ್ಯಮಂತ್ರಿಗಳ ನಡೆಗೆ ಮುಂಬರುವ ದಿನಗಳಲ್ಲಿ ಪಂಚಮಸಾಲಿ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜನರಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಇದರೊಂದಿಗೆ ತಳ್ಳಾಟ, ನುಗ್ಗಾಟಗಳೂ ನಡೆದು, ಕೆಲಕಾಲ ಪ್ರತಿಭಟನೆಯ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪಟ್ಟು ಬಿಡದ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿದರು.
ಪ್ರತಿಭಟನೆ ಇನ್ನಷ್ಟು ತೀವ್ರಗೊಂಡು, ಪ್ರತಿಭಟನಾಕಾರರು ಸಿಎಂ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಬಾಯಿ ಬಾಯಿ ಬಡಿದುಕೊಳ್ಳುವ ವೇಳೆ ಪೊಲೀಸರು ಬೆಂಕಿ ನಂದಿಸಲು ಮುಂದಾದಾಗ ಸಮಾಜದ ಯುವಕರು ಮತ್ತೆ ಅಡ್ಡಿಪಡಿಸಿದರು. ಈ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಯುವ ಮುಖಂಡ ಶಿವರಾಜಗೌಡ ಹಿರೇಮನಿಪಾಟೀಲ ಹಾಗೂ ಇನ್ನೋರ್ವ ಯುವಕನ ಕಾಲಿಗೆ ಬೆಂಕಿ ತಗುಲಿತು. ತಕ್ಷಣವೇ ಇನ್ನುಳಿದ ಪ್ರತಿಭಟನಾಕಾರರು ಬೆಂಕಿ ನಂದಿಸಿದರೂ ಇಬ್ಬರಿಗೂ ಕೈ ಮತ್ತು ಕಾಲಿಗೆ ಸುಟ್ಟ ಸಣ್ಣಪುಟ್ಟ ಗಾಯಗಳಾಗಿವೆ.
ಬೆಳಗಾವಿಯಲ್ಲಿ ಅನಗತ್ಯವಾಗಿ ನಮ್ಮ ಪಂಚಮಸಾಲಿ ಸಮುದಾಯ ಬಾಂಧವರ ಮೇಲೆ ಲಾಠಿ ಚಾರ್ಜ್ ನಡೆಸಿದರು. ಅದನ್ನು ಖಂಡಿಸಿ ಗದಗ ನಗರದಲ್ಲಿ ಹೋರಾಟ ಮಾಡುತ್ತಿರುವ ವೇಳೆಯಲ್ಲಿಯೂ ಪೊಲೀಸರು ನಮ್ಮ ಪ್ರತಿಭಟನೆಗೆ ಅಡ್ಡಿ ಪಡಿಸಲು ಮುಂದಾದರು. ಇದರಿಂದಾಗಿ ನನ್ನ ಪ್ಯಾಂಟ್ ಹಾಗೂ ಕೈಗೆ ಬೆಂಕಿ ತಗಲಿ ಸುಟ್ಟ ಗಾಯಗಾಳಾಗಿವೆ.
– ಶಿವರಾಜಗೌಡ ಹಿರೇಮನಿಪಾಟೀಲ.
ಪ್ರತಿಭಟನೆಯಲ್ಲಿ ಗಾಯಗೊಂಡ ವ್ಯಕ್ತಿ.
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಶಾಂತಿಯುತವಾಗಿ ಹೋರಾಟ ನಡೆಸಿದರೂ ಪೊಲೀಸರು ಸರ್ಕಾರದ ಕುಮ್ಮಕ್ಕಿನಿಂದಾಗಿ ಮೊನ್ನೆ ಬೆಳಗಾವಿಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ. ಜಿಲ್ಲಾ ಕೇಂದ್ರದಲ್ಲೂ ನ್ಯಾಯಯುತ ಪ್ರತಿಭಟನೆಗೆ ಅಡ್ಡಿಪಡಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದಾಗಿ ನಮ್ಮ ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು.
– ವಸಂತ ಪಡಗದ.
ಪಂಚಮಸಾಲಿ ಸಮುದಾಯದ ಯುವ ಮುಖಂಡ.