ಹಾವೇರಿ: ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಮಂಡ್ಯ, ಮದ್ದೂರು ಘಟನೆ ನೋಡಿದಾಗ ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಕುಸಿದಿದೆ. ಕಾನೂನು ಭಯ, ಪೊಲೀಸರ ಭಯ ಜನರಲ್ಲಿ ಇಲ್ಲದಂತಾಗಿದೆ. ಸರ್ಕಾರ ಹಲವು ಪ್ರಕರಣಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದರು.
ಇನ್ನೂ ಗೃಹ ಸಚಿವರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜಾತಿ, ಧರ್ಮ, ಮತ, ಪಂಥದ ಹೆಸರಿನಲ್ಲಿ ದೇಶ ಒಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಜಿಎಸ್ಟಿ ಅನುದಾನ ಕಡಿತಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ನ್ಯಾಯಾಲಯಕ್ಕೆ ಹೋಗುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಸಿಎಂ ಸಿದ್ದರಾಮಯ್ಯ ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಮನಸ್ಸಿನಲ್ಲಿ ಮಂಡಿಗಿ ತಿಂದರೆ ಲೆಕ್ಕ ಕೊಡುವವರು ಯಾರು? ಎಂದು ಪ್ರಶ್ನಿಸಿದರು.