ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಗದಗ ಜಿಲ್ಲಾ ಪೊಲೀಸ್, ಗದಗ ಉಪವಿಭಾಗ, ಶಿರಹಟ್ಟಿ ವೃತ್ತ ಹಾಗೂ ಪಟ್ಟಣದ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಮತ್ತು ರಸ್ತೆ ಸುರಕ್ಷತಾ ಅರಿವು ಅಭಿಯಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ನಂ.4ರ ವಿದ್ಯಾರ್ಥಿಗಳು ಪಾಲ್ಗೊಂಡು ಜಾಗೃತಿ ಮೂಡಿಸಿದರು.
ಶಾಲಾ ಮಕ್ಕಳು ರಸ್ತೆ ಸುರಕ್ಷತೆಯ ಘೋಷಣೆಗಳನ್ನು ಮೊಳಗಿಸಿದರು. ಹೆಲ್ಮೆಟ್ ಧರಿಸಿ, ಸೀಟ್ ಬೆಲ್ಟ್ ಧರಿಸಿ ಜೀವ ಉಳಿಸಿ, ಅತಿವೇಗ ಅಪಾಯಕ್ಕೆ ಆಹ್ವಾನ, ವಾಹನಗಳ ಚಲಾವಣೆಯಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಎಂದು ಕೂಗಿದರು. ಪಂಪವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.
ನಂತರ ಜಾಥವನ್ನು ಉದ್ದೇಶಿಸಿ ಮಾತನಾಡಿದ ಪಿಎಸ್‌ಐ ನಾಗರಾಜ ಗಡಾದ, ಕಾನೂನಿನ ಅರಿವಿನಿಂದ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಪ್ರತಿ ಗ್ರಾಮದಲ್ಲಿ ಜನಸ್ನೇಹಿ ಪೊಲೀಸರನ್ನು ನೇಮಕ ಮಾಡಿದ್ದು, ಅವರ ವಿಳಾಸ, ಫೋನ್ ನಂಬರ್ ನಿಮ್ಮ ಗ್ರಾಮದಲ್ಲೇ ಸಿಗುತ್ತದೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದು ಎಲ್ಲವೂ ಜೀವ ಉಳಿಸುವ ದಾರಿಗಳೇ ಹೊರತು ಕೇವಲ ಕಾನೂನುಗಳಲ್ಲ. ನಮ್ಮ ಜೀವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇತರರ ಜೀವಕ್ಕೂ ಹಾನಿಯಾಗದಂತೆ ಎಚ್ಚರ ವಹಿಸಿ.
ದಾರಿಯಲ್ಲಿ ಮಕ್ಕಳು ಅಡ್ಡಾಡುವಾಗ, ಶಾಲಾ ಪ್ರದೇಶಗಳಲ್ಲಿ ವಾಹನಗಳನ್ನು ನಿಧಾನವಾಗಿ ಚಲಿಸಿ, ಜೀವ ಅತ್ಯಮೂಲ್ಯ ಎನ್ನುವದನ್ನು ಎಲ್ಲರೂ ಅರಿತುಕೊಂಡು ಪ್ರಯಾಣಿಸಿ. ರಸ್ತೆ ಸುರಕ್ಷತೆಗೆ ಅಪರಾಧ ತಡೆಗೆ ಸಾರ್ವಜನಿಕ ಸಹಕಾರ ಅಗತ್ಯ ಎಂದು ಸಲಹೆ ನೀಡಿದರಲ್ಲದೆ, ಮನೆಗಳ್ಳತನ, ವಾಹನ ಕಳ್ಳತನ ನಡೆಯುತ್ತಿದ್ದು, ಸಾರ್ವಜನಿಕರು ಮನೆಗಳಿಗೆ ಕೀಲಿ ಹಾಕಿ ಬೇರೆ ಕಡೆ ತೆರಳುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅಪರಾಧಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸಿ ಎಂದರು.
ಜಾಥಾದಲ್ಲಿ ಶಾಲಾ ಶಿಕ್ಷಕರು, ಪೊಲೀಸ್ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.