ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇಲ್ಲಿನ ಪುಲಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನದ ಮೇಲ್ಛಾವಣಿ ಕಳೆದ ಹಲವು ವರ್ಷಗಳಿಂದ ಸೋರುತ್ತಿದೆ. ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಗೊಳಪಡುವ ಈ ದೇವಸ್ಥಾನದ ಮೇಲ್ಛಾವಣಿ, ಶಿಥಿಲಗೊಂಡ ಉತ್ತರ ದ್ವಾರದ ದುರಸ್ತಿ, ಮೂಲಭೂತ ಸೌಲಭ್ಯಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಕಲ್ಪಿಸುವಂತೆ ಅನೇಕ ಬಾರಿ ಭಕ್ತರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರೂ ಆದ ಹೆಚ್.ಕೆ. ಪಾಟೀಲರು ದೇವಸ್ಥಾನದ ಅಭಿವೃದ್ಧಿಗೆ 50 ಲಕ್ಷ ರೂ ಅನುದಾನ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದರಾದರೂ ಇದುವರೆಗೂ ಅನುದಾನ ಮಂಜೂರಾಗಿಲ್ಲ. ಈ ಹಿಂದೆ ಡಾ. ಸುಧಾಮೂರ್ತಿ ಅವರು ಇನ್ಫೋಸಿಸ್ ಪ್ರತಿಷ್ಠಾನದಿಂದ ಕೋಟ್ಯಾಂತರ ರೂ ಖರ್ಚು ಮಾಡಿ ದೇವಸ್ಥಾನ ಅಭಿವೃದ್ಧಿಪಡಿಸಿದ್ದರೂ ಮೇಲ್ಛಾವಣಿ ದುರಸ್ಥಿ ಕಾರ್ಯವಾಗಿಲ್ಲ.
ಪ್ರತಿ ವರ್ಷ ಮಳೆಗಾಲದಲ್ಲಿ ದೇವಸ್ಥಾನದ ಮುಖ್ಯ ಪ್ರಾಂಗಣ ಸೋರುತ್ತಿದ್ದು, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗುತ್ತಿದೆ. ಸದ್ಯ ಶ್ರಾವಣ ಮಾಸದ ಪ್ರಯುಕ್ತ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮ ಸೋರುವ ಪ್ರಾಂಗಣದಲ್ಲಿಯೇ ನಡೆಯುತ್ತಿದೆ. ಮಂಗಳವಾರ ಸುರಿದ ಮಳೆಯಿಂದ ದೇವಸ್ಥಾನದ ಮಾಳಿಗೆ ಜಿನುಗುಟ್ಟುತ್ತಿರುವುದರಿಂದ ಭಕ್ತರೇ ಹಣ ಸಂಗ್ರಹಿಸಿ ತಾಡಪತ್ರಿ ಹೊದಿಕೆ ಹಾಕಿದ್ದಾರೆ. ಈ ಪರಿಸ್ಥಿತಿ ಭಕ್ತರಲ್ಲಿ ನೋವುಂಟು ಮಾಡಿದೆ.
ಪ್ರಾಚ್ಯ ವಸ್ತು ಇಲಾಖೆಯ ಪರವಾನಗಿ ಇಲ್ಲದೇ ದೇವಸ್ಥಾನದಲ್ಲಿ ಯಾವುದೇ ದುರಸ್ತಿ, ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ದೇವಸ್ಥಾನ ರಕ್ಷಣೆಗೆ ಮುಂದಾಗಬೇಕು ಎಂಬುದು ಭಕ್ತರ ಒತ್ತಾಸೆಯಾಗಿದೆ.