ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಸ್ತುತ ದಿನಗಳಲ್ಲಿ ಕಾನೂನು ಸಮಾಜದ ಕಣ್ಣಾಗಿ ಪರಿವರ್ತನೆಯಾಗುತ್ತಿದೆ. ಯಾವುದೇ ಕ್ಷೇತ್ರವಾಗಲಿ, ಸಮಸ್ಯೆಯಾಗಲಿ ಮೊದಲು ನೆನಪಿಗೆ ಬರುವುದು ವಕೀಲರು ಎಂಬ ಭಾವನೆ ಜನರಲ್ಲಿದೆ. ಪತಿ-ಪತ್ನಿಯ ಮುಂದೆ, ಪತ್ನಿ-ಪತಿ ಮುಂದೆ ಹೇಳದ ವಿಷಯವನ್ನು ನ್ಯಾಯವಾದಿಗಳ ಮುಂದೆ ಪ್ರಸ್ತಾಪಿಸಿ ನ್ಯಾಯವನ್ನು ಪಡೆಯಲು ಮುಂದಾಗುತ್ತಿರುವ ಪರಿಸ್ಥಿತಿ ಇದೆ. ಆದ್ದರಿಂದ ವಕೀಲ ವೃತ್ತಿಗೆ ಹೆಜ್ಜೆ ಹಾಕುತ್ತಿರುವ ಯುವ ವಕೀಲರು ಸಮಾಜದ ಕಣ್ಣಾಗಿ ಕಾರ್ಯ ಮಾಡಬೇಕಿದೆ ಎಂದು ಗದಗ ಮುಖ್ಯ ಹಿರಿಯ ದಿವಾನಿ ಮತ್ತು ಪ್ರಧಾನ ನ್ಯಾಯಿಕ ದಂಡಾಧಿಕಾರಿ ಜಿ.ಆರ್. ಶೆಟ್ಟರ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಜರುಗಿದ ಎಲ್.ಎಲ್.ಬಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ವಿವಿಧ ಸ್ಪರ್ಧೆಗಳಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನ್ಯಾಯಾಲಯ ಮತ್ತು ನ್ಯಾಯವಾದಿಗಳ ಸಂಬಂಧ ಉತ್ತಮವಾಗಿರಬೇಕಾದರೆ ಯುವ ಸಮುದಾಯದ ವಕೀಲರು ಕಠಿಣ ಪರಿಶ್ರಮ ಮತ್ತು ಹೆಚ್ಚು ಪುಸ್ತಕಗಳನ್ನು ಅಭ್ಯಾಸ ಮಾಡುವ, ಹೊಸ ಹೊಸ ಮಹತ್ವದ ತೀರ್ಪುಗಳನ್ನು ಪುಸ್ತಕಗಳಲ್ಲಿ ಹುಡುಕುವ ಪ್ರಸಂಗ ಇತ್ತು. ಆದರೆ, ಸದ್ಯ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ತುದಿ ಬೆರಳಲ್ಲಿ ಹೊಸ ರೋಲಿಂಗ್ ದೊರೆಯುತ್ತಿವೆ. ಹೀಗಾಗಿ ಅವುಗಳ ಜ್ಞಾನದ ಜೊತೆಗೆ ಅವುಗಳಲ್ಲಿನ ತತ್ವ-ಸಿದ್ಧಾಂತಗಳು ತಮ್ಮ ಪ್ರಕರಣಗಳಿಗೆ ಅನ್ವಯವಾಗುತ್ತವೆಯೇ ಎಂಬುದರ ಬಗ್ಗೆ ಸಂಪೂರ್ಣ ಜ್ಞಾನ ಹೊಂದಬೇಕು. ನ್ಯಾಯಾಲಯಗಳಲ್ಲಿ ವಿವಿಧ ರೀತಿಯ ಪ್ರಕರಣ ಮತ್ತು ಜನರು ಬರುತ್ತಾರೆ. ಅವರ ಸಮಸ್ಯೆಗಳನ್ನು ಆಲಿಸಿ ಅವರ ಪ್ರಕರಣಕ್ಕೆ ನ್ಯಾಯ ಒದಗಿಸಲು ಶ್ರಮ ವಹಿಸಬೇಕು ಎಂದರು.
ಸ್ಥಳೀಯ ಆಡಳಿತ ಮಂಡಳಿ ಚೇರಮನ್ ಎಸ್.ಎ. ಮಾನ್ವಿ ಮಾತನಾಡಿ, ಕಾನೂನು ಜ್ಞಾನ ಸಂಪಾದನೆ ನಂತರ ಸಮಾಜಸೇವೆಗೆ ಆದ್ಯತೆ ನೀಡುವುದು ಕೂಡ ಅವಶ್ಯಕವಾಗಿದೆ. ಆದ್ದರಿಂದ ವಕೀಲರು ಸಮಾಜದಲ್ಲಿನ ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದರು.
ವಕೀಲರು ಹಾಗೂ ಸಿಂಡಿಕೇಟ್ ಸದಸ್ಯ ಮೋಹನ ಭಜಂತ್ರಿ, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಎಫ್. ಹಾದಿಮನಿ, ಬಿ.ಜಿ. ಶಿಳ್ಳಿಕೇರಿ, ಹಿರಿಯ ನ್ಯಾಯವಾದಿಗಳಾದ ಜಿ.ಸಿ. ರೇಶ್ಮಿ, ಬಿ.ಎ. ಹಿರೇಮಠ, ಸಿ.ಎಸ್. ರಾಚಣ್ಣವರ, ಗುರುರಾಜ ಗೌರಿ ಇದ್ದರು.
ಉಪನ್ಯಾಸಕ ಡಾ. ವಿಜಯ ಮುರದಂಡೆ ವಾರ್ಷಿಕ ವರದಿಯನ್ನು ವಾಚಿಸಿದರು. ಡಾ. ಶ್ರೀನಿವಾಸ ಪಾಲ್ಕೊಂಡ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚೈತ್ರ ಗೌಡ್ರ, ಶೃತಿ ಇಂಡಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಭೂಮಿಕಾ ಉಪಾಧ್ಯ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸಂತೋಷ ಭದ್ರಾಪೂರ ವಂದಿಸಿದರು.
ಕಾಲೇಜಿನ ಪ್ರಾಚಾರ್ಯ ಜೈಹನುಮಾನ ಎಚ್.ಕೆ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಕಾನೂನು ಪುಸ್ತಕದ ಜ್ಞಾನದ ಜೊತೆಗೆ ಪ್ರಾಯೋಗಿಕ ತರಬೇತಿ ಕೂಡ ಬಹಳ ಅಗತ್ಯವಾಗಿದೆ. ಇತ್ತೀಚಿನ ವಕೀಲರು ವಾದ ಮಂಡನೆ, ವಾದ ಸೇರಿದಂತೆ ಸಾಕ್ಷಿಗಳನ್ನು ಯಾವ ರೀತಿಯಲ್ಲಿ ಸಾದರಪಡಿಸಬೇಕೆಂಬುದನ್ನು ಅರಿಯಬೇಕಿದೆ ಎಂದರು.