HomeBengaluru Cityಅಹಂ ಬಿಟ್ಟು ಸಮನ್ವಯದಿಂದ ಕೆಲಸ ಮಾಡಿ

ಅಹಂ ಬಿಟ್ಟು ಸಮನ್ವಯದಿಂದ ಕೆಲಸ ಮಾಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಯಾರೂ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಂತಹ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳು ತಲೆ ಎತ್ತುತ್ತಿದ್ದು, ಅಂತಹ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಅಂತಹ ವ್ಯಕ್ತಿಗಳೂ ಯಾರೇ ಆಗಿದ್ದರೂ, ಅವರನ್ನು ಮಟ್ಟ ಹಾಕುವುದು, ಅಂತಹ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕಾದುದು ಡಿಸಿ, ಸಿಇಒ, ಎಸ್‌ಪಿಗಳ ಜವಾಬ್ದಾರಿಯಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳು, ಸಿಇಒ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು, ಹಿಂದಿನ ಸಭೆಯಲ್ಲಿ ನೀಡಿದ ಸೂಚನೆಗಳು, ತೆಗೆದುಕೊಂಡ ನಿರ್ಣಯಗಳಲ್ಲಿ ಕೆಲವು ಇಲಾಖೆಗಳು ಶೇ. 100ರಷ್ಟು ಪ್ರಗತಿ ತೋರಿಸಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜಿ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ನಿಷ್ಠುರವಾಗಿ ಕ್ರಮ ಕೈಗೊಳ್ಳುವುದು ನಮಗೆ ಅನಿವಾರ್ಯ ಎಂದರು.

ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಸಿಇಒಗಳು ತಮ್ಮ ಅಹಂ ಬದಿಗೊತ್ತಿ ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಉದ್ದೇಶಕ್ಕಾಗಿಯೇ ನೀವು ಐಎಎಸ್ ಮಾಡಿರುವುದು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಮತ್ತು ಜನಪರ ಆಶಯಗಳಿಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನೀವೆಲ್ಲಾ ಸಂವಿಧಾನ ಓದಿದ್ದೀರಿ, ಅದರ ಆಶಯಗಳಿಗೆ, ಧ್ಯೇಯೋದ್ದೇಶಗಳಿಗೆ ಬದ್ದರಾಗಿದ್ದೀರಿ ಎಂದು ನಂಬಿದ್ದೇನೆ. ಇದನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ ವಿಫಲರಾದವರ ವಿರುದ್ಧ ನಾನು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧಿರಿಸಿದ್ದೇನೆ ಎಂದು ಎಚ್ಚರಿಸಿದರು.

ನಾವು ಜನರ ತೆರಿಗೆ ದುಡ್ಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ. ನಾವು-ನೀವು ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿರುವುದು ಜನರ ತೆರಿಗೆ ಹಣದಿಂದ ಎನ್ನುವುದನ್ನು ಮರೆಯಬಾರದು. ಕಾರು, ಮನೆ ಸೇರಿ ಎಲ್ಲಾ ಸವಲತ್ತುಗಳನ್ನು ನಾವು ಕೊಟ್ಟಿರುವುದು ತೆರಿಗೆ ಹಣದಲ್ಲಿ. ಆದ್ದರಿಂದ ಜನಪರ ಧೋರಣೆಯಲ್ಲಿ ಕೆಲಸ ಮಾಡಬೇಕು. ಇದೇ ಪ್ರಜಾಪ್ರಭುತ್ವದ ಮೂಲ ಆಶಯ ಎಂದರು.

ಈ ವರ್ಷ 700 ಬಾಲ್ಯ ವಿವಾಹ ನಡೆದಿದೆ. ಬಾಲ್ಯದಲ್ಲೇ ತಾಯಂದಿರಾದ ಘಟನೆಗಳೂ ವರದಿಗಳಾಗಿವೆ. ಈ ಬಗ್ಗೆ ಹಲವು ಕಡೆ ಎಫ್‌ಐಆರ್ ಕೂಡ ದಾಖಲಾಗಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಸ್ವಾತಂತ್ರ‍್ಯ ಬಂದು ಇಷ್ಟ ವರ್ಷಗಳಾದರೂ 700 ಬಾಲ್ಯ ವಿವಾಹ ನಡೆಯುತ್ತಿದೆ ಎಂದರೆ ಹೇಗೆ? ಬಾಲ್ಯವಿವಾಹ ತಡೆಗೆ ಕಾಯ್ದೆ, ಕಾನೂನುಗಳಿವೆ. ಆದರೂ ಇದನ್ನು ಪರಿಣಾಮಕಾರಿಯಾಗಿ ಕೆಲವು ಕಡೆ ಬಳಸಿಲ್ಲ. ಇದು ತಪ್ಪಲ್ಲವೇ ಎಂದು ಸಿ.ಎಂ ಖಾರವಾಗಿ ಪ್ರಶ್ನಿಸಿದರು.

ಇಂದಿರಾ ಕ್ಯಾಂಟೀನ್ ಪೂರ್ಣಗೊಳಿಸಿ

ನಮ್ಮ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಂದಿರಾ ಕ್ಯಾಂಟೀನ್‌ಗಳಿಗೆ ಇನ್ನೂ 5 ಕಡೆ ಸ್ಥಳ ಗುರುತಿಸಬೇಕಾಗಿದೆ. ತಕ್ಷಣ ನಿವೇಶನ ಗುರುತಿಸಬೇಕು. ಆಹಾರ ವಿತರಣೆ 43 ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಾತ್ರ ಪ್ರಾರಂಭವಾಗಿದೆ. ಎಲ್ಲಾ ಕಡೆ ಆಹಾರ ವಿತರಣೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.

ಪರಿಹಾರ ವಿಳಂಬಕ್ಕೆ ಸಿಎಂ ಗರಂ

ಜಿಲ್ಲಾವಾರು ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ಗಮನಿಸಿದ ಮುಖ್ಯಮಂತ್ರಿಗಳು, ಇನ್ನೂ 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ನೋಡಿ ಅಸಮಾಧಾನಗೊಂಡ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಂದ ವರದಿ ಪಡೆದರು. ಹಾವೇರಿ ಸೇರಿ ಇನ್ನೆರಡು ಜಿಲ್ಲೆಗಳಲ್ಲಿ ಒಟ್ಟು 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇದ್ದು, ಆದಷ್ಟು ಬೇಗ ಬಗೆಹರಿಸಿ ಪರಿಹಾರ ಒದಗಿಸಿ ಎಂದು ಸೂಚಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!