ಬೆಂಗಳೂರು: ಕ್ಷುಲ್ಲಕ ರಾಜಕೀಯ ಬಿಟ್ಟು ನಿಮ್ಮ ಕಲಬುರ್ಗಿ ಜಿಲ್ಲೆಯ ನೆರೆ ಅನಾಹುತ ಸರಿಮಾಡಿ ಎಂದು ಸಚಿವ ಪ್ರಿಯಾಂಕ ಖರ್ಗೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಜೆಡಿಎಸ್ ಕೇಸರಿಕರಣವಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಈ ಕ್ಷುಲ್ಲಕ ರಾಜಕೀಯ ಬಿಟ್ಟು ಕಲಬುರಗಿ ಜಿಲ್ಲೆಯಲ್ಲಿ ಆಗಿರುವ ನೆರೆ ಅನಾಹುತವನ್ನು ಸರಿ ಮಾಡಿ ಎಂದು ಕಿವಿಮಾತು ಹೇಳಿದರು.
ಅಧಿಕಾರಕ್ಕಾಗಿ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್. ಅವತ್ತು ಏನೇನು ನಡೆಯಿತು ಎನ್ನುವುದನ್ನು ಅವರು ತಮ್ಮ ತಂದೆಯನ್ನು ಕೇಳಿ ತಿಳಿದುಕೊಳ್ಳಲಿ. ಬೆಂಗಳೂರಿನಲ್ಲಿ ರಾಜಕೀಯ ಮಾಡುವ ಬದಲು ತಮ್ಮ ಜಿಲ್ಲೆಯಲ್ಲಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ಮಾಡಿದರು. ಕಾಂಗ್ರೆಸ್ ನವರು ಮಾತೆತ್ತಿದರೆ ತಾಜ್ ಹೋಟೆಲ್ ನಲ್ಲಿ ಇದ್ದೆ ಅಂತಾರೆ. ನಾನು ತಾಜ್ ಹೊಟೇಲಿನಲ್ಲಿ ಮಲಗಿದ್ದರೆ ರೈತರ 25 ಸಾವಿರ ಕೋಟಿ ಸಾಲಮನ್ನಾ ಮಾಡೋಕೆ ಆಗುತ್ತಿತ್ತಾ? ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರಿಗೆ ನಾನು ಸಿಎಂ ಅಗಿದ್ದಾಗ ಅಭಿವೃದ್ದಿಗಾಗಿ 19 ಸಾವಿರ ಕೋಟಿ ಅನುದಾನವನ್ನು ಒಂದೇ ವರ್ಷದಲ್ಲಿ ಕೊಟ್ಟಿದ್ದೆ. ಇವತ್ತು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಇದ್ದಾಗ ಏನ್ ಕೊಟ್ರು ಅಂತ ಚರ್ಚೆ ಮಾಡ್ತಾರೆ. ದಾಖಲೆ, ಅಂಕಿ ಅಂಶಗಳು ಅವರ ಬಳಿಯೇ ಇವೆ. ಮೊದಲು ನೋಡಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಆರ್ ಎಸ್ ಎಸ್ ಬ್ಯಾನ್ ವಿಚಾರವಾಗಿ ಮಾತನಾಡಿ, ಹಿಂದೆ ನಾನು ಆರ್ ಎಸ್ ಎಸ್ ಅನ್ನು ಟೀಕೆ ಮಾಡಿದ್ದೇನೆ. ಇಲ್ಲ ಅಂತ ಹೇಳಲ್ಲ. ಕಾಂಗ್ರೆಸ್ ನವರು ನೀವೇನು ಮಾಡಿದ್ದೀರಾ? ರಾಜ್ಯದಲ್ಲಿ 136 ಸೀಟು ಕೊಟ್ಟಿದ್ದಾರೆ. ಜನರ ಸಮಸ್ಯೆ ಕೇಳ್ತಿಲ್ಲ. ಕಲಬುರ್ಗಿಯಲ್ಲಿ ಜನ ಬೀದಿಯಲ್ಲಿ ಇದ್ದಾರೆ. ರೈತರು ಸಂಕಷ್ಟದಲ್ಲಿ ಇದ್ದಾರೆ ಏನು ಮಾಡಿದ್ದೀರಪ್ಪ? ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.