ಬೆಂಗಳೂರು:- ನನ್ನ ರಾಜಕೀಯ ಜೀವನ ಮುಗಿಸಲು ವಿಜಯೇಂದ್ರ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಸುಧಾಕರ್ ಹೇಳಿಕೆಯನ್ನು ಶಾಸಕ ಎಸ್ ಆರ್ ವಿಶ್ವನಾಥ್ ಖಂಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸುಧಾಕರ್ ರಾಜ್ಯಾಧ್ಯಕ್ಷರ ಬಗ್ಗೆ ಹಗುರ ಮಾತಾಡಿರೋದು ನನಗೆ ಹಿಡಿಸಲಿಲ್ಲ. ಈ ಹಿಂದೆಯೂ ನನ್ನ ಬಗ್ಗೆ ಅವರು ಮಾತನಾಡಿದ್ದಾರೆ. ನಾನೇನು ದಡ್ಡ ಅಲ್ಲ, ನನಗೂ ಅರ್ಥ ಆಗುತ್ತೆ. ಅವರಿಂದ ಸರ್ಕಾರ ರಚನೆ ಆಗಿರಬಹುದು, ಆದ್ರೆ 17 ಜನರಲ್ಲಿ ಕೊನೆಯದಾಗಿ ಬಂದವರು ಸುಧಾಕರ್. ಅವರ ಮೇಲೆ ವಿಧಾನಸೌಧದಲ್ಲಿ ಹಲ್ಲೆ ನಡೆದಾಗ ನಾನೇ ಹೋಗಿ ಬಚಾವ್ ಮಾಡಿದೆ ಎಂದು ಹೇಳಿದ್ದಾರೆ.
ಸುಧಾಕರ್ ಕೋವಿಡ್ ನಿರ್ವಹಿಸಿದ್ರು, ಸಮರ್ಥ ಸಚಿವ ಆಗಿದ್ದವರು. ಸಮರ್ಥ ಸಚಿವ ಅನಿಸಿಕೊಂಡ ಮೇಲೆ ಚಿಕ್ಕಬಳ್ಳಾಪುರ ಯಾಕೆ ಸೋತ್ರಿ? ಚಿಕ್ಕಬಳ್ಳಾಪುರದಲ್ಲಿ ಒಳ್ಳೇ ಕೆಲಸ ನೀವು ಮಾಡಿದ್ರೆ ಜನ ಯಾಕೆ ನಿಮ್ಮನ್ನ ಸೋಲಿಸ್ತಿದ್ರು? ಎಂಪಿ ಸ್ಥಾನದ ಟಿಕೆಟ್ ಸಿಗಲ್ಲ ಅಂತಾದಾಗ ಏನೇನು ಮಾತಾಡಿದ್ರಿ? ಕಾಂಗ್ರೆಸ್‌ನವರ ಜೊತೆ ಆಗ ನೀವು ಮಾತಾಡಲಿಲ್ಲವಾ? ಆಗ ನಿಮಗೆ ಪಕ್ಷ ನಿಷ್ಠೆ ಇತ್ತಾ? ನೀವು ಕಾಂಗ್ರೆಸ್ ಜೊತೆಗೆ ಮಾತಾಡಲಿಲ್ಲ ಅಂದ್ರೆ ಪ್ರಮಾಣ ಮಾಡಿ, ನಾನು ಪ್ರಮಾಣ ಮಾಡ್ತೀನಿ ಅಂತ ಸುಧಾಕರ್‌ಗೆ ಸವಾಲ್ ಹಾಕಿದ್ದಾರೆ.
ಇನ್ನೂ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರ ಕುರಿತು ಮಾತನಾಡಿದ ಶಾಸಕರು, ಜಿಲ್ಲೆಗೆ ತಲಾ ಮೂರು ಹೆಸರು ಕಳಿಸಲಾಗಿತ್ತು. ಈ ಪೈಕಿ ಸಂದೀಪ್ ರೆಡ್ಡಿ ಆಯ್ಕೆ ಆಗಿದ್ದಾರೆ. ಅವರು ನಿನ್ನ ಬಂಧುವೂ ಅಲ್ಲ, ನನ್ನ ಸಂಬಂಧಿಯೂ ಅಲ್ಲ. ಏನ್ ತೀರ್ಮಾನ ತಗೋತೀರಿ, ಪಕ್ಷ ಬಿಡ್ತೀರಾ? ನಿನಗೆ ತಾಕತ್ತಿದ್ದರೆ ಪಕ್ಷ ಬಿಟ್ಟು ಚುನಾವಣೆಗೆ ಬಾ.. ನಮ್ಮ ಬಗ್ಗೆ, ಯಲಹಂಕ ಕಾರ್ಯಕರ್ತರ ಬಗ್ಗೆ ಗೌರವ ಇಟ್ಕೊಂಡು ಮಾತಾಡು… ಅದನ್ನು ಬಿಟ್ಟು ನಮ್ಮ ಕ್ಷೇತ್ರದಲ್ಲಿ ಮುಖಂಡರನ್ನ ಎತ್ತಿ ಕಟ್ಟೋ ಕೆಲಸ ಮಾಡಬೇಡ ಅಂತ ಸುಧಾಕರ್ ವಿರುದ್ಧ ಏಕವಚನದಲ್ಲಿ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ರಾಜ್ಯ ಬಿಜೆಪಿ ಕಲಹ ಈಗ ಬೀದಿ ರಂಪವಾಗಿದೆ. ಬಿ.ವೈ ವಿಜಯೇಂದ್ರ ನಾಯಕತ್ವದ ವಿರುದ್ಧ ಆಕ್ರೋಶ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಜಿಲ್ಲಾಧ್ಯಕ್ಷರ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಬಿಜೆಪಿ ಮನೆಯ ಚಿತ್ರಣವೇ ಬದಲಾಗಿದೆ. ಬಿಜೆಪಿ ಬಂಡಾಯದ ಬೆಂಕಿಗೆ ಏಕಪಕ್ಷೀಯವಾಗಿ ಜಿಲ್ಲಾಧ್ಯಕ್ಷರ ನೇಮಕ ಮಾಡಿದ್ದು ತುಪ್ಪ ಸುರಿದಂತಾಗಿದೆ