ಬೆಂಗಳೂರು:- ಟನಲ್ ರೋಡ್ ಬಿಟ್ಟು, ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ ಸ್ವಾಮಿ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲೆಳೆದಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳುಗಳಿಂದ ವೇತನ ನೀಡಿಲ್ಲ ಎಂಬುದು ಕೇಳಿಬಂದಿದೆ. ಈ ಕುರಿತು X ಮಾಡಿರುವ ಆರ್ ಅಶೋಕ್ ಅವರು, ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ’ ಎಂದು ಡಿಕೆ ಶಿವಕುಮಾರ್ಗೆ ಟಾಂಗ್ ಕೊಟ್ಟಿದ್ದಾರೆ.
ಟ್ವಿಟ್ಟರ್ ನಲ್ಲಿ ಏನಿದೆ?
ಸುರಂಗ ರಸ್ತೆ ಮಾಡುತ್ತೇನೆ, ಸ್ಕೈ ಡೆಕ್ ಮಾಡುತ್ತೇನೆ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ, ಜಿಬಿಎ ಮಾಡುತ್ತೇನೆ ಎಂದು ಬರೀ ಓಳು ಬಿಟ್ಟು ಕನ್ನಡಿಗರಿಗೆ ಚೊಂಬು ಕೊಟ್ಟಿದ್ದೇ ನಿಮ್ಮ ಸಾಧನೆ. ನಿಮ್ಮ ಜಿಬಿಎ ಅವ್ಯವಸ್ಥೆಯಿಂದ ಪಾಲಿಕೆ ಶಿಕ್ಷಕರು ಕಳೆದ 4 ತಿಂಗಳಿಂದ ಸಂಬಳವಿಲ್ಲದೆ ಸಂಸಾರ ತೂಗಿಸಲು ಪರದಾಡುತ್ತಿದ್ದಾರೆ. ಮೊದಲು ಅವರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಶಿಕ್ಷಕರ ಸಮಸ್ಯೆ ಬಗೆಹರಿಸಿ.’ ಎಂದು ಡಿಕೆ ಶಿವಕುಮಾರರನ್ನು ಟ್ಯಾಗ್ ಮಾಡಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ಇನ್ನೂ ಶಾಲೆಗಳು ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಗುತ್ತಿಗೆ ಶಿಕ್ಷಕರಿಗೆ ಪ್ರತಿ ತಿಂಗಳೂ ಗೌರವಧನ ನೀಡಲಾಗುತ್ತಿತ್ತು. ಈಗ ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಶಾಲೆ- ಕಾಲೇಜುಗಳನ್ನು ಆಯಾ ಕಾರ್ಪೋರೇಷನ್‌ಗಳ ಸುಪರ್ದಿಗೆ ವಹಿಸಿಲ್ಲ. ತಾಂತ್ರಿಕ ನೆಪವೊಡ್ಡಿ ಕಡತ ವಿಲೇ ಮಾಡದ ಕಾರಣ ಶಿಕ್ಷಕರಿಗೆ ವೇತನ ಬಿಡುಗಡೆ ಆಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಶಿಕ್ಷಕರಿಗೆ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದಾಗಿ ಡಿಸಿಎಂ ಶಿವಕುಮಾರ್ ಭರವಸೆ ನೀಡಿದ್ದರು. ಮಹಿಳಾ ಶಿಕ್ಷಕರಿಗೆ ಹೆರಿಗೆ ರಜೆ ಕೂಡ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.


