ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ಎಲ್ಲ ಬಸವಾದಿ ಶರಣರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು. ಶರಣರ ವಚನಗಳು ಅಮೃತವಿದ್ದಂತೆ ಮತ್ತು ಬದುಕಿಗೆ ದಾರಿ ದೀಪದಂತೆ. ವಿದ್ಯಾರ್ಥಿಗಳು ಜೀವನದಲ್ಲಿ ನಯ-ವಿನಯದಿಂದ ನಡೆದುಕೊಳ್ಳಬೇಕು. ನಡೆ-ನುಡಿ ಹೇಗಿರಬೇಕೆಂದರೆ, ನವಿಲು ಗರಿಬಿಚ್ಚಿ ಕುಣಿಯುವಂತಿರಬೇಕು ಎಂದು ಗದಗ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ ಹೇಳಿದರು.
ಅವರು ನಗರದ ತೋಂಟದ ಸಿದ್ಧೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶ್ರಾವಣ ಮಾಸದ ಪ್ರಯಕ್ತ ತಾಲೂಕಾ ಕದಳಿ ಮಹಿಳಾ ವೇದಿಕೆಯಿಂದ ಏರ್ಪಡಿಸಲಾಗಿದ್ದ `ಬಸವಾದಿ ಶರಣರ ವಚನಗಳ ಜ್ಞಾನಾಮೃತ’ ವಿಷಯ ಕುರಿತು ಉಪನ್ಯಾಸ ನೀಡುತ್ತಿದ್ದರು.
ನಾವು ಸಂಪೂರ್ಣವಾಗಿ ಶರಣರೇ ಆಗಲು ನಾವು ಎಷ್ಟು ಸಾಧ್ಯವೋ ಅಷ್ಟು ಶರಣ ಮಾರ್ಗದಲ್ಲಿ ನಡೆಯಬೇಕು. ಕಾಯಕದೊಳಗೆ ನಿರತರಾಗಬೇಕು. ಅಂದರೆ ನಾವು ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ.
ಕಾಯಕವು ಹೇಗಿರಬೇಕೆಂದರೆ ಸತ್ಯವಾಗಿಯೂ, ಶುದ್ಧವಾಗಿಯೂ ಇರಬೇಕು. ವಿದ್ಯಾರ್ಥಿಗಳಾದ ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮಲ್ಲಿ ಒಳ್ಳೆ ಚಿಂತನೆ ಒಳ್ಳೆ ಛಲಗಳಿರಬೇಕು.
ನೀವು ಏನನ್ನು ಸಾಧಿಸಬೇಕಾದರೂ ಶರಣರ ಅನುಭವದ ನುಡಿ ಮುತ್ತುಗಳಾದ ವಚನಗಳ ಅಧ್ಯಯನ ಮಾಡುವುದರಿಂದ ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ಬದುಕು ಸಾರ್ಥಕವಾಗುತ್ತದೆ. ನೀವು ಕೂಡಾ ಮತ್ತೊಬ್ಬರಿಗೆ ಆದರ್ಶಪ್ರಾಯರಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತೀರಿ ಎಂದು ಮುಟ್ಟುವಂತೆ ಹಾಸ್ಯ ಚಟಾಕಿಗಳೊಂದಿಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತೋಂಟದ ಸಿದ್ಧೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಸುರೇಶ ಎಸ್. ಭಜಂತ್ರಿ `ಬಸವಾದಿ ಶರಣರ ವಚನಗಳ ಜ್ಞಾನಾಮೃತ’ ಎಂಬ ವಿಷಯ ಕುರಿತು ಉಪನ್ಯಾಸ ಮಾಡಲು ನಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ತುಂಬಾ ಸಂತೋಷ ತಂದಿದೆ.
ಇಂದು ವಿದ್ಯಾರ್ಥಿಗಳು ತಂತ್ರಜ್ಞಾನಗಳ ಅಭಿವೃದ್ಧಿಯಿಂದ ವಿದ್ಯಾವಂತರಾಗಿ ಬೆಳೆದರೆ ಸಾಲದು, ಜೊತೆಗೆ ಅವರಿಗೆ ಇಂಥ ವಚನ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ವೈಚಾರಿಕ ಭಾವನೆ ಮೂಡಿಸುತ್ತವೆ ಎಂದರು.
ವಚನ ಪ್ರಾರ್ಥನೆಯನ್ನು ನಯನಾ ಅಳವಂಡಿ ಹಾಡಿದರು. ಸ್ವಾಗತ ಮತ್ತು ನಿರೂಪಣೆಯನ್ನು ಮಂಜುಳಾ ಎಫ್. ಅಕ್ಕಿ, ವಂದನಾರ್ಪಣೆಯನ್ನು ಕಲಾವತಿ ಸಂಕನಗೌಡರ ಮಾಡಿದರು.
ತಾಲೂಕಾ ಕದಳಿ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ರೇಣುಕಾ ವಿ.ಕರೇಗೌಡ್ರ, ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ಪ್ರಾಧ್ಯಾಪಕರಾದ ಡಾ. ಎಮ್.ವ್ಹಿ. ಐಹೊಳ್ಳಿ, ಪ್ರೇಮಾ ಮೇಟಿ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉದ್ಘಾಟಕರಾಗಿ ಆಗಮಿಸಿದ ತಾಲೂಕಾ ಕದಳಿ ಮಹಿಳ ವೇದಿಕೆ ಗೌರವಾಧ್ಯಕ್ಷರಾದ ರತ್ನಕ್ಕ ಪಾಟೀಲರವರು ಮಾತನಾಡುತ್ತಾ, ವಿದ್ಯಾರ್ಥಿಗಳು ಪಠ್ಯ-ಪುಸ್ತಕಗಳೊಂದಿಗೆ ವಚನಗಳ ಮೌಲ್ಯಯುತ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವದರಿಂದ ನಿಮ್ಮ ಜೀವನ ಶೈಲಿಯೇ ಬದಲಾಗುತ್ತದೆ. ಆದ್ದರಿಂದ ನೀವು ಈ ಶರಣ-ಶರಣೆಯರ ವಚನಗಳನ್ನು ಓದುವದರಲ್ಲಿ ಆಸಕ್ತಿ ತೋರಿಸಿ. ನಿಮ್ಮ ಬಾಳು ಬಂಗಾರವಾಗುವುದರಲ್ಲಿ ಅನುಮಾನವೇ ಇಲ್ಲ ಎಂದರು.