ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಎಲ್&ಟಿ ಕಂಪನಿಯು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು, ಸರ್ಕಾರಕ್ಕೂ ತೃಪ್ತಿ ಇಲ್ಲ. ಸಾಕಷ್ಟು ಬಾರಿ ಸಲಹೆ-ಸೂಚನೆಗಳನ್ನು ನೀಡಿದರೂ ಸುಧಾರಿಸದ ಈ ಕಂಪನಿ ವಿರುದ್ಧ ಮೊಕದ್ದಮೆ ಹೂಡಿ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.
ಅವರು ಸೋಮವಾರ ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 2025-26ನೇ ಸಾಲಿನ 2ನೇ ತ್ರೆಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದಿನ 15 ದಿನಗಳಲ್ಲಿ ಎಲ್&ಟಿ ಕಂಪನಿಯ ಅಧಿಕಾರಿಗಳು ಮತ್ತು ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಜರುಗಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ವಿ.ಪ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಪ್ರಗತಿ ಪರಿಶೀಲನಾ ಸಭೆಗೆ ಬರುವ ಮೊದಲು ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ತರಬೇಕು. ಕೆಡಿಪಿ ಸಭೆಯು ಮಹತ್ವದ್ದಾಗಿರುವದರಿಂದ ಇಲಾಖಾವಾರು ಪ್ರಗತಿ ಪರಿಶೀಲನೆ, ಅನುದಾನ ಬಳಕೆ ಮತ್ತು ಯೋಜನೆ, ಕಾಮಗಾರಿಗಳ ಅನುಷ್ಠಾನದಲ್ಲಿ ಎದುರಿಸುವ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಇವುಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಾಣಲು ಪ್ರಯತ್ನಿಸಲಾಗುತ್ತದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ಸೌಲಭ್ಯಗಳನ್ನು ಪೂರೈಸುತ್ತಿಲ್ಲ. ಈ ಕುರಿತು ಅಧಿಕಾರಿಗಳು ಕ್ರಮವಹಿಸಬೇಕು ಎಂದರು.
ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ವಿ.ಪ ಸದಸ್ಯ ಎಫ್.ಹೆಚ್. ಜಕ್ಕಪ್ಪನವರ, ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ವೇದಿಕೆಯಲ್ಲಿ ವಿ. ಪ ಸದಸ್ಯ ಪ್ರದೀಪ ಶೆಟ್ಟರ, ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಇದ್ದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಅತಿಯಾದ ಹಾಗೂ ನಿರಂತರ ಮಳೆಯಿಂದಾಗಿ ಈ ಬಾರಿ ಹೆಸರು, ಗೋವಿನಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಅವೈಜ್ಞಾನಿಕವಾಗಿ ರಾಸಾಯನಿಕ ಗೊಬ್ಬರ ಬಳಸುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಹೇಳಿದರು.


